ಗ್ರಾ.ಪಂ. ನೌಕರರ ವೇತನ : ಕಾಲಮಿತಿಯಲ್ಲಿ ಮಂಜೂರಾತಿಗೆ ಆಗ್ರಹ

ಶಿವಮೊಗ್ಗ,ಡಿ.28: ಪಂಚಾಯತ್ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಕಡತ ಗ್ರಾಪಂ ಸಿ-74 ಹಣಕಾಸು ಇಲಾಖೆಯಿಂದ ಮಂಜೂರಾತಿ ಪಡೆದು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ಇ-ಎಫ್‍ಎಂಎಸ್ ಮೂಲಕ ವೇತನ ಪಾವತಿ ಮಾಡಬೇಕು. ಅನುಮೋದನೆ ಮಾಡದಿರುವ ಎಲ್ಲಾ ನೌಕರರನ್ನು ಅನುಮೋಧನೆ ಮಾಡಬೇಕೆಂದು ಆಗ್ರಹಿಸಿದರು.
ಆರ್‍ಡಿಪಿಆರ್ ಇಲಾಖೆ ಗ್ರಾಮಪಂಚಾಯಿತಿ ನೌಕರರಿಗೆ ಇ-ಎಫ್‍ಎಂಎಸ್ ಮೂಲಕ ಕನಿಷ್ಠ ವೇತನ ನೀಡುವ ಆದೇಶ ನೀಡಿದ್ದರೂ ಹಣ ಬಿಡುಗಡೆಯಾಗದೆ ನೌಕರರು ಸಂಕಷ್ಟದಲ್ಲಿದ್ದಾರೆ. ಎಂದು ತಿಳಿಸಿದರು.
ನೌಕರರ ಭಡ್ತಿಗೆ ಅಡ್ಡಿಯಾಗಿರುವ ವಿದ್ಯಾರ್ಹತೆ ಪಿಯುಸಿ ರದ್ದುಪಡಿಸಿ, ಮೊದಲಿನಂತೆ ಎಸ್‍ಎಸ್‍ಎಲ್‍ಸಿ ಪಾಸಾದವರಿಗೆ ಭಡ್ತಿ ನೀಡಲು ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಬೇಕು. 20-30 ವರ್ಷ ಸೇವೆ ಸಲ್ಲಿಸಿರುವ ಪಂಪ್ ಆಪರೇಟರ್, ಕಸ ಗುಡಿಸುವವರು, ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್ ಮತ್ತು ಇತರೆ ನೌಕರರನ್ನು ಏಕ ಕಾಲದಲ್ಲಿ ಅನುಮೋದನೆ ನೀಡಲು ನಿರ್ಧರಿಸಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಈಗಾಗಲೇ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ಗಣಕಯಂತ್ರ ನಿರ್ವಾಹಕರನ್ನು ಮುಂದುವರೆಸಬೇಕು. 1100 ಗ್ರೇಡ್-2 ಗ್ರಾ.ಪಂ.ಗಳನ್ನು ಗ್ರೇಡ್-1 ಮೇಲ್ದರ್ಜೆಗೇರಿಸಲು ಕ್ರಮ ಜರುಗಿಸಬೇಕು. ಪಂಚಾಯಿತಿ ನೌಕರರಿಗೆ ಸೇವೆ ನಿಯಮವನ್ನು ಕಡತ ಡಿಪಿಆರ್ ಹಣಕಾಸು ಕಾನೂನು ಇಲಾಖೆ ಅಭಿಪ್ರಾಯ ಪಡೆದು ಜಾರಿಗೊಳಿಸಬೇಕು. ನಿವೃತ್ತಿ ವೇತನ ಮಂಜೂರಾತಿ ನೀಡಬೇಕು. ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನ ಜಾರಿಗೊಳಿಸಬೇಕೆಂಬುದ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ಪ್ರಮುಖರಾದ ಶೇಖರಪ್ಪ, ಬಂಗಾರಪ್ಪ, ಪ್ರಶಾಂತ್, ಬಸವರಾಜ್, ಯೋಗರಾಜ್, ನಾಗೇಶ್, ಶ್ರೀಧರ್ ಮೊದಲಾದವರು ಇದ್ದರು.







