ದ.ಕ.ಜಿಲ್ಲಾ ನೆಟ್‌ಬಾಲ್ ಪಂದ್ಯಾಟಕ್ಕೆ ಚಾಲನೆ

ಮಂಗಳೂರು, ಡಿ.27: ಕರಾವಳಿ ಉತ್ಸವ ಸಮಿತಿ, ಜಿಲ್ಲಾಡಳಿತ, ದ.ಕ ಜಿಪಂ, ಮನಪಾ ಮಂಗಳೂರು ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನೆಟ್‌ಬಾಲ್ ಪಂದ್ಯಾಟಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ ಜಿಪಂ ಉಪ ಕಾರ್ಯದರ್ಶಿ ಎಂ.ವಿ. ನಾಯಕ್ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಹಾಗಾಗಿ ಆಸಕ್ತಿಯಿಂದ ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆಯುವ ಅಗತ್ಯವಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಕ್ರೀಡಾ ಸಂಯೋಜಕ ಹಾಗೂ ಜಿಲ್ಲೆಗೆ ನೆಟ್‌ಬಾಲನ್ನು ಪರಿಚಯಿಸಿದ ಪ್ರೇಮನಾಥ ಶೆಟ್ಟಿ ಮಾತನಾಡಿ ಪ್ರಾರಂಭಿಕ ಹಂತದಲ್ಲಿ ನೆಟ್‌ಬಾಲ್‌ಗೆ ಜಿಲ್ಲೆಯಲ್ಲಿ ಪ್ರೋತ್ಸಾಹ ಸಿಗದಿದ್ದರೂ 10 ವರ್ಷದ ಪರಿಶ್ರಮದ ನಂತರ ಈಗ ಈ ಕ್ರೀಡೆಗೆ ಕರಾವಳಿ ಉತ್ಸವದ ಮುಖಾಂತರ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ಸಂತಸ ತಂದಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಕ್ರೀಡಾಧಿಕಾರಿ ಲಿಲ್ಲಿ ಪಾಸ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ನೆಟ್‌ಬಾಲ್ ಆಟಗಾರ ನಿತಿನ್ ಅವರನ್ನು ಸನ್ಮಾನಿಸಲಾಯಿತು. ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನಡೆದ ಈ ಪಂದ್ಯಾಟದಲ್ಲಿ 26 ತಂಡಗಳು ಭಾಗವಹಿಸಿದೆ.





