‘ವಿರುಷ್ಕಾ’ ಆರತಕ್ಷತೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಅನಿಲ್ ಕುಂಬ್ಳೆ

ಹೊಸದಿಲ್ಲಿ, ಡಿ.27: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಹಾಗು ನಾಯಕ ವಿರಾಟ್ ಕೊಹ್ಲಿ ನಡುವಿನ ಮನಸ್ತಾಪಕ್ಕೆ ‘ವಿರುಷ್ಕಾ’ ಜೋಡಿಯ ಮದುವೆ ಆರತಕ್ಷತೆ ಕಾರ್ಯಕ್ರಮ ಇತಿಶ್ರೀ ಹಾಡಿದಂತಿದೆ.
ಮಂಗಳವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಜಂಬೋ’ ಅನಿಲ್ ಕುಂಬ್ಳೆ ತಮ್ಮ ಪತ್ನಿ ಚೇತನ ಜೊತೆಗೆ ಆಗಮಿಸಿದ್ದರು. ಕೋಚ್ ಹುದ್ದೆಗೆ ಕುಂಬ್ಳೆ ರಾಜೀನಾಮೆ ನೀಡುತ್ತಲೇ ವಿರಾಟ್ ಕೊಹ್ಲಿಯವರ ಜೊತೆಗಿನ ಮನಸ್ತಾಪವೇ ಇದಕ್ಕೆ ಕಾರಣ ಎನ್ನಲಾ ಗಿತ್ತು. ಕುಂಬ್ಳೆ ಕೋಚ್ ಆಗಿದ್ದ ಸಂದರ್ಭ ಭಾರತ ತಂಡವು ಇಂಗ್ಲೆಂಡ್, ನ್ಯೂಝಿಲ್ಯಾಂಡ್ ಹಾಗು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಜಯ ಗಳಿಸಿತ್ತು.
ಆದರೆ ಕುಂಬ್ಳೆ ಕಾರ್ಯ ಶೈಲಿಯ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇತರ ಹಿರಿಯ ಆಟಗಾರರು ಅಸಮಾಧಾನ ಹೊಂದಿದ್ದಾರೆ ಎಂದು ವರದಿಯಾಗಿತ್ತು. ಕುಂಬ್ಳೆ ಸ್ಥಾನಕ್ಕೆ ರವಿಶಾಸ್ತ್ರಿಯವರನ್ನು ಕೋಚ್ ಆಗಿ ನೇಮಿಸುವ ಚರ್ಚೆಗಳೂ ನಡೆದಿದ್ದವು,
ಒಟ್ಟಿನಲ್ಲಿ ನಿನ್ನೆ ಮುಂಬೈನಲ್ಲಿ ನಡೆದ ವಿರಾಟ್ –ಅನುಷ್ಕಾ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕುಂಬ್ಳೆ ಅಚ್ಚರಿ ಹುಟ್ಟಿಸಿದ್ದಾರೆ.





