15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಾಷಿಂಗ್ ಮೆಷಿನ್‌ನಲ್ಲಿ ಪತ್ತೆ !

ಮುಂಬೈ, ಡಿ. 27: ಒಂದು ಲಕ್ಷ ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ 54 ವರ್ಷದ ಆರೋಪಿ ಸೋಮವಾರ ಜುಹುನಲ್ಲಿರುವ ತನ್ನ ನಿವಾಸದಲ್ಲಿ ವಾಷಿಂಗ್ ಮೆಶಿನ್‌ನಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಆಝಾದ್ ಮೈದಾನದಲ್ಲಿರುವ ಆತನ ಮನೆಯಲ್ಲಿ ಗಂಟೆಗಳ ಕಾಲ ಶೋಧ ನಡೆಸಲಾಯಿತು. ಆದರೆ, ಅಂತಿಮವಾಗಿ ಆತ ವಾಷಿಂಗ್ ಮೆಶಿನ್ ಒಳಗಡೆ ಬಟ್ಟೆಯೊಂದಿಗೆ ಅವಿತಿರುವುದು ಪತ್ತೆಯಾಯಿತು ಎಂದು ಅಝಾದ್ ಮೈದಾನ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ವಸಂತ್ ವಾಕಾಹ್ರೆ ತಿಳಿಸಿದ್ದಾರೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿ 2002ರಲ್ಲಿ ನ್ಯಾಯಾಲಯ ಆತನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ಆತ ಈ ಹಿಂದೆ 1 ಕೋ. ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆದುದರಿಂದ ಆತನನ್ನು ಪತ್ತೆ ಹಚ್ಚಿ ಎಂದು ಪೊಲೀಸ್ ಆಯುಕ್ತರು ಆದೇಶಿಸಿದ ಬಳಿಕ ನಾವು ಜುಹನಲ್ಲಿರುವ ಆತನ ಮನೆಯಲ್ಲಿ ಶೋಧ ನಡೆಸಿದೆವು ಎಂದು ಅವರು ಹೇಳಿದ್ದಾರೆ.
ಬಿಎಡ್ ಕೋರ್ಸ್‌ಗೆ ಪ್ರವೇಶ ಒದಗಿಸಿ ಕೊಡುವುದಾಗಿ 2002ರಲ್ಲಿ 1 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ವಾಕಾಹ್ರೆ ತಿಳಿಸಿದ್ದಾರೆ.







