ಅಸೈಗೋಳಿ: ಅಭಯಾಶ್ರಯದ ಸಂಸ್ಥಾಪನಾ ದಿನಾಚರಣೆ

ಕೊಣಾಜೆ, ಡಿ. 27: ಗಡಿಕಾಯುವ ಸೈನಿಕರು ಕೊರೆಯುವ ಚಳಿಗೂ ಎದೆಗುಂದದೆ ನಮ್ಮ ರಕ್ಷಣೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಂದಾಗಿಯೇ ನಾವು ನೆಮ್ಮದಿಯುತವಾದ ಜೀವನವನ್ನು ನಡೆಸುತ್ತಿದ್ದೇವೆ. ಆದ್ದರಿಂದ ನಾವು ಪ್ರತಿನಿತ್ಯ ದೇವರಲ್ಲಿ ನಮಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ ಇದರ ಜೊತೆ ದೇಶ ಪ್ರೇಮದೊಂದಿಗೆ ಗಡಿಕಾಯುವ ಸೈನಿಕರಿಗೂ ಪ್ರತಿದಿನ ಪ್ರಾರ್ಥನೆ ಸಲ್ಲಿಸಿ ಪುಣ್ಯ ಕಟ್ಟಿಕೊಳ್ಳೋಣ ಎಂದು ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ ಅವರು ಹೇಳಿದರು.
ಅಸೈಗೋಳಿಯಲ್ಲಿರುವ ಅಭಯ ಆಶ್ರಯದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬುಧವಾರ ಅಭಯಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹಿರಿಯರು ಒಬ್ಬಂಟಿಗಳಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು. ಆದ್ದರಿಂದ ಅನಾಥರಿಗೆ, ಅಥವಾ ಹಿರಿಯ ನಾಗರಿಕರಿಗೆ ವಾತ್ಸಲ್ಯದೊಂದಿಗೆ ಆಶ್ರಯವನ್ನು ಕೊಡುವ ಇಂತಹ ಅಭಯಾಶ್ರಗಳು ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ, ನಿಟ್ಟೆ ವಿವಿಯ ಎನ್. ವಿನಯ್ ಹೆಗ್ಡೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ ಅವರನ್ನು ಅಭಯಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವ, ನಿಟ್ಟೆ ವಿವಿಯ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅವರು ಗೌರವ ಸ್ವೀಕರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಅವರು, ಬಡವರ ನಿರ್ಗತಿಕರ, ಅನಾಥರಿಗೆ ಪ್ರೀತಿ ವಾತ್ಸಲ್ಯದ ಮೂಲಕ ಆಶ್ರಯ ನೀಡುತ್ತಿರುವ ಅಭಯಾಶ್ರಯವು ಕಳೆದ ಹವಾರು ವರ್ಷಗಳಿಂದ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.
ಇಂತಹ ಮಾದರಿ ಸೇವೆಯನ್ನು ನಡೆಸುತ್ತಿರುವ ಅಭಯಾಶ್ರಯದ ಎಲ್ಲ ಟ್ರಸ್ಟಿಗಳಿಗೂ ನಾವು ಅಭಿನಂದಿಸಲೇ ಬೇಕು ಎಂದು ಹೇಳಿದರು.
ಅಸೈಗೋಳಿ ಅಭಯಾಶ್ರದ ಅಧ್ಯಕ್ಷರಾದ ಶ್ರೀನಾಥ್ ಹೆಗ್ಡೆ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ರಾಮಶೇಷ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ಡಾ.ಲತಾ ಅಭಯಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.







