ಡಿ.29ರಿಂದ ಕುವೆಂಪು ಸಾಹಿತ್ಯ ಸಮಾವೇಶ
ಬೆಂಗಳೂರು, ಡಿ.27: ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಡಿ.29ರಿಂದ 30ರವರೆಗೆ ಕುವೆಂಪು ಸಾಹಿತ್ಯ ಸಂವಾದ ಸಮಾವೇಶವನ್ನು ಮಲ್ಲತ್ತಹಳ್ಳಿಯ ಸುವರ್ಣ ಸಮುಚ್ಚಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದು, ಸಮಾವೇಶದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ.ಚಂದ್ರಶೇಖರ್ ಪಾಟೀಲ್ ನೆರವೇರಿಸಲಿದ್ದಾರೆ.
ಡಿ.29ರ ಬೆಳಗ್ಗೆ 10ಗಂಟೆಗೆ ಸಮಾವೇಶದ ಉದ್ಘಾಟನೆ ನೆರವೇರಲಿದ್ದು, ಸಮ್ಮೇಳನದ ಅಧ್ಯಕ್ಷತೆಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಭಾಗವಹಿಸಲಿದ್ದಾರೆ.
ಆಶಯ ಭಾಷಣವನ್ನು ವಿಮರ್ಶಕ ಎಚ್.ದಂಡಪ್ಪ ಮಾಡಲಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ ಉಪಸ್ಥಿತರಿರುತ್ತಾರೆ. ನಂತರ ನಡೆಯುವ ಕುವೆಂಪು ಸಾಹಿತ್ಯ-ಸಂವಾದ ಗೋಷ್ಠಿಯಲ್ಲಿ ಸಮಕಾಲೀನ ಸಂದರ್ಭ-ಕುವೆಂಪು ಸಾಹಿತ್ಯದ ವೈಚಾರಿಕತೆ ಕುರಿತು ಡಾ.ಬಂಜಗೆರೆ ಜಯಪ್ರಕಾಶ್ ಉಪನ್ಯಾಸ ನೀಡಲಿದ್ದು, ಅಧ್ಯಕ್ಷತೆಯನ್ನು ವಿಮರ್ಶಕ ಡಾ.ಎಸ್.ಆರ್.ವಿಜಯಶಂಕರ್ ವಹಿಸಲಿದ್ದಾರೆ. ಸಂವಾದದಲ್ಲಿ ಡಾ.ಆರ್.ಚಲಪತಿ, ಡಾ.ಅಶೋಕರಂಜೇರೆ, ಅರುಣ್ ಜೋಳದ ಕೂಡ್ಲಿಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ನಡೆಯುವ ಎರಡನೆ ಗೋಷ್ಠಿಯಲ್ಲಿ ಡಾ.ಕೆ.ಸಿ.ಶಿವಾರೆಡ್ಡಿ ಅವರು ಕುವೆಂಪು ಸಾಹಿತ್ಯದಲ್ಲಿ ನಿಸರ್ಗ ಮತ್ತು ಜೈವಿಕ ಜಾಲ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂವಾದದಲ್ಲಿ ಡಾ.ಕರಿಗೌಡ ಬೀಚನಹಳ್ಳಿ, ಡಾ.ಎಚ್.ಶಶಿಕಲಾ, ಡಾ.ಸುರೇಶ್ ನಾಗಲಮಡಿಕೆ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರೊ.ಚಂದ್ರಶೇಖರ ನಂಗಲಿ ವಹಿಸಲಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ ವತಿಯಿಂದ ಸಿ.ಬಸವಲಿಂಗಯ್ಯನವರು ನಿರ್ದೇಶಿಸಿರುವ ಮಲೆಗಳಲ್ಲಿ ಮದುಮಗಳು ನಾಟಕದ ಪ್ರದರ್ಶನವನ್ನು ರಾತ್ರಿ 8ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಏರ್ಪಡಿಸಲಾಗಿದೆ.
ಡಿ.30ರ ಮಧ್ಯಾಹ್ನ 3 ಗಂಟೆಗೆ ಸಮಕಾಲೀನ ಸಂದರ್ಭ; ಬಹುತ್ವದ ಬಿಕ್ಕಟ್ಟು ಎಂಬ ವಿಷಯವನ್ನು ಕುರಿತು ಉಪನ್ಯಾಸ ಕಾರ್ಯಕ್ರಮವಿದ್ದು, ಇದರ ಅಧ್ಯಕ್ಷತೆಯನ್ನು ಪ್ರೊ.ಜಿ.ಕೆ.ಗೋವಿಂದರಾವ್ ವಹಿಸಲಿದ್ದಾರೆ. ಡಾ.ಬಿ.ಗಂಗಾಧರಮೂರ್ತಿ, ಡಾ.ಎಚ್.ಎಸ್.ಅನುಪಮ ಉಪನ್ಯಾಸ ನೀಡಲಿದ್ದಾರೆ. ಸಂಜೆ 5 ರಿಂದ 7ರವರೆಗೆ ಸುಕನ್ಯಾ ಮಾರುತಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಕನ್ನಿಮೋಳಿ, ವಿಮಲಾ ಮಾರ್ಟಲ್, ಅನಿತಾ ತಂಪಿ, ಚಕ್ರಧರ್ ಮಾಹಿರ್ ಮನ್ಸೂರ್, ಎಚ್.ಎಲ್.ಪುಷ್ಪ, ಕೆ.ಷರೀಫಾ, ಮಮತಾ ಸಾಗರ್, ಟಿ.ಯಲ್ಲಪ್ಪ, ಪೀರ್ ಭಾಷಾ ಬಿ, ಚೀಮನಹಳ್ಳಿ ರಮೇಶ್‌ಬಾಬು, ಚಾಂದ್ ಪಾಷಾ ಮತ್ತು ಸಿದ್ದಾರ್ಥ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.







