ಉಡುಪಿ: ಕೊರಗ ‘ಮಕ್ಕಳ ಮನೆ’ಗೆ ಲೋಕಾಯುಕ್ತರ ಭೇಟಿ

ಉಡುಪಿ, ಡಿ.27: ಸಮಾಜದ ಮುಖ್ಯವಾಹಿನಿಗೆ ಕೊರಗ ಸಮುದಾಯ ಬರಬೇಕಾದರೆ ಶಿಕ್ಷಣ ಅತಿ ಮುಖ್ಯ. ಆ ಕಾರ್ಯ ಕುಂಬಾಶಿ ಮಕ್ಕಳ ಮನೆಯಲ್ಲಿ ಯಶಸ್ವಿಯಾಗಿರುವುದನ್ನು ನೋಡಿ ಸಂತೋಷವಾಗಿದೆ ಎಂದು ರಾಜ್ಯದ ಲೋಕಾಯುಕ್ತ ನ್ಯಾಯಮೂರ್ತಿ ಟಿ.ವಿಶ್ವನಾ ಥ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬುಧವಾರ ಕುಂಭಾಶಿಯ ಮಕ್ಕಳ ಮನೆಯಲ್ಲಿ ಜಿಲ್ಲಾ ಆಡಳಿತ ಮತ್ತು ಕುಂದಾಪುರ ಕಾನೂನು ಸೇವಾ ಸಮಿತಿ ಜಂಟಿಯಾಗಿ ಆಯೋಜಿಸಿದ ಕಾನೂನು ಮಾಹಿತಿ ಕಾರ್ಯಾಗಾರದಲ್ಲಿ ಮಕ್ಕಳ ಮನೆಯ ಮಕ್ಕಳಿಂದ ಹಾಡು, ನೃತ್ಯ, ಡೋಲು ವಾದನ, ಬುಟ್ಟಿ ನೇಯ್ಗೆ ಮುಂತಾದ ಕರಕುಶಲತೆಗಳನ್ನು ವೀಕ್ಷಿಸಿದರು.
ಸಮಾಜದಲ್ಲಿ ಗಿರಿಜನರಿಗೆ ಮತ್ತು ಪರಿಶಿಷ್ಟ ಪಂಗಡದವರ ಬಗ್ಗೆ ಕಳಕಳಿ ಇರುವಂತವರು, ಗಿರಿಜನ ಸಮುದಾಯಕ್ಕೆ ಮತ್ತು ಅವರ ಮಕ್ಕಳ ಏಳಿಗೆಗೆ ಯಾವ ರೀತಿಯಲ್ಲಿ ಸಹಕಾರ ಮಾಡಬಹುದು ಎಂಬ ವಿಚಾರದಲ್ಲಿ ಹೆಚ್ಚಿನ ಫಲಪ್ರದ ಸಂವಾದ ನಡೆಯಿತು.
ಇದು ನನಗೆ ಅತ್ಯಂತ ಸಂತೋಷ ತಂದು ಕೊಡುವ ಕಾರ್ಯಕ್ರಮ. ಇನ್ನು ಮುಂದಕ್ಕೂ ಈ ಭವನದಲ್ಲಿ ಮತ್ತು ಜಿಲ್ಲೆಯ ಎಲ್ಲಾ ಪರಿಶಿಷ್ಟ ಸಮುದಾಯಕ್ಕೆ ಸೇರಿರುವ ಕಡೆಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮ ನಡೆದು ಅವರ ಏಳಿಗೆಗೆ ಎಲ್ಲರೂ ಸಹಕರಿಸುವುದು ಅಗತ್ಯ ಎಂದು ಜ.ವಿಶ್ವನಾಥ್ ಶೆಟ್ಟಿ ನುಡಿದರು.
ಕಾರ್ಯಕ್ರಮದಲ್ಲಿ ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಲಲಿತಾ, ಬಿಸಿಎಂ ಅಧಿಕಾರಿ ಹರೀಶ್ ಗಾಂವ್ಕರ್, ಸಮಾಜ ಕಲ್ಯಾಣ ಇಲಾಖೆ ಯ ಉಪನಿರ್ದೇಶಕ ರಮೇಶ್, ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪ್ರಕಾಶ್ ಖಂಡೇರಿ, ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರಸ್ವಾಮಿ, ಸೋಮನಾಥ ಹೆಗಡೆ ಬನ್ನಾಡಿ, ಶರತ್‌ಕುಮಾರ್, ಕೊರಗ ಸಂಘಟನೆಯ ಗಣೇಶ್ ಕುಂದಾಪುರ ಹಾಗೂ ಗಣೇಶ್ ಬಾರ್ಕೂರ್ ಉಪಸ್ಥಿತರಿದ್ದರು.







