ಲಾರಿಗೆ ಕಾರು ಢಿಕ್ಕಿ: ಓರ್ವ ಮೃತ್ಯು
ಬ್ರಹ್ಮಾವರ, ಡಿ.27: ಕಾರೊಂದು ಅತೀವೇಗವಾಗಿ ಬಂದು ನಿಲ್ಲಿಸಿದ ಲಾರಿಯೊಂದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಅಪರಾಹ್ನ 3 ರ ಸುಮಾರಿಗೆ ವಾರಂಬಳ್ಳಿ ಗ್ರಾಮದ ಎಸ್‌ಬಿಕೆಎಸ್ ಎಂಟರ್‌ಪ್ರೈಸಸ್ ಗ್ಯಾರೇಜ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ಮುಹಮ್ಮದ್ ಇರ್ಫಾನ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಭಾಗಕ್ಕೆ ಬಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು ಎಂದು ತಿಳಿದುಬಂದಿದೆ.
ಢಿಕ್ಕಿ ಹೊಡೆದ ರಭಸಕ್ಕೆ ಕಾರು ಲಾರಿಯ ಹಿಂಭಾಗಕ್ಕೆ ಸಿಕ್ಕಿ ಹಾಕಿಕೊಂಡಿದ್ದು, ಕಾರನ್ನು ಹೊರತೆಗೆದಾಗ ಅದರೊಳಗೆ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಅವರ ತಂದೆ ಇಸ್ಮಾಯಿಲ್ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಚಾಲಕನಿಗೂ ತೀವ್ರವಾದ ಗಾಯಗಳಾಗಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





