ಮನಮೋಹನ್ ಸಿಂಗ್, ಅನ್ಸಾರಿಯವರ ರಾಷ್ಟ್ರ ಬದ್ಧತೆಯನ್ನು ಪ್ರಧಾನಿ ಪ್ರಶ್ನಿಸಿಲ್ಲ: ಅರುಣ್ ಜೇಟ್ಲಿ

ಹೊಸದಿಲ್ಲಿ, ಡಿ. 27: ಗುಜರಾತ್ ವಿಧಾನ ಸಭೆ ಚುನಾವಣೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಅವರ ರಾಷ್ಟ್ರ ಬದ್ಧತೆಯನ್ನು ಪ್ರಶ್ನಿಸಿರಲಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ ಅವರ ರಾಷ್ಟ್ರ ಬದ್ಧತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿಲ್ಲ ಹಾಗೂ ಪ್ರಶ್ನಿಸುವ ಉದ್ದೇಶವೂ ಅವರಿಗೆ ಇರಲಿಲ್ಲ. ಅಂತಹ ಯಾವುದೇ ಗ್ರಹಿಕೆ ಸರಿಯಾದುದಲ್ಲ. ನಾವು ಅವರ ಬಗ್ಗೆ ಹಾಗೂ ಅವರಿಗೆ ದೇಶದ ಬಗ್ಗೆ ಅವರಿಗೆ ಇರುವ ಬದ್ಧತೆ ಬಗ್ಗೆ ಗೌರವ ಹೊಂದಿದ್ದೇವೆ ಎಂದರು.
ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಆರಂಭವಾದಂದಿನಿಂದ ಈ ವಿಷಯದ ಕುರಿತು ಪ್ರಧಾನಿ ಮೋದಿ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಜೇಟ್ಲಿ ಈ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ಅವರ ಗೌರವಕ್ಕೆ ಧಕ್ಕೆ ಉಂಟಾಗಿರುವ ಸಾಧ್ಯತೆ ಇರುವುದರಿಂದ ಚುನಾವಣಾ ಸಂದರ್ಭ ಯಾವುದೇ ಸದಸ್ಯ ನೀಡಿದ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಸಭೆಯ ವಿಪಕ್ಷದ ನಾಯಕ ಗುಲಾಂ ನಬಿ ಆಝಾದ್ ಹೇಳಿದ್ದಾರೆ.
ಗುಜರಾತ್ ವಿಧಾನ ಸಭಾ ಚುನಾವಣೆ ಪ್ರಚಾರದ ಸಂದರ್ಭ ಚುನಾವಣೆಯಲ್ಲಿ ಪಾಕಿಸ್ತಾನ ಮಧ್ಯಪ್ರವೇಶಿಸುತ್ತಿದೆ ಎಂದು ಪ್ರತಿಪಾದಿಸಿದ್ದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ ಪಾಕಿಸ್ತಾನದ ಮಾಜಿ ಅಧಿಕಾರಿಗಳನ್ನು ಹೊಸದಿಲ್ಲಿಯಲ್ಲಿ ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂದು ಆರೋಪಿಸಿದ್ದರು.
ಈ ಹೇಳಿಕೆ ಕುರಿತಂತೆ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಮನಮೋಹನ್ ಸಿಂಗ್, ಮೋದಿ ಅವರು ಸುಳ್ಳುಗಳನ್ನು ಹರಡುತ್ತಿದ್ದಾರೆ. ಪ್ರತಿ ಸಾಂವಿಧಾನಿಕ ಹುದ್ದೆಯನ್ನು ಕಳಂಕಗೊಳಿಸುವ ಅಪಾಯಕಾರಿ ಪೂರ್ವ ನಿದರ್ಶನವನ್ನು ಹಾಕಿ ಕೊಡುತ್ತಿದ್ದಾರೆ ಎಂದಿದ್ದಾರೆ.







