2018ರ ಚುನಾವಣೆ ಬಹಿಷ್ಕರಿಸಲು ಚಿಂತನೆ : ನಾಯಕರ ಬೀದಿಯ ನಿವಾಸಿಗಳ ಹೇಳಿಕೆ
ಚಾಮರಾಜನಗರ, ಡಿ.27: ನಗರಸಭೆ ವ್ಯಾಪ್ತಿಗೆ ಬರುವ ರಾಮಸಮುದ್ರದ ನಾಯಕರ ಬಡಾವಣೆಯು ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವುದರಿಂದ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ಚಿಂತನೆ ಮಾಡಲಾಗುವುದು ಎಂದು ನಾಯಕರ ಬೀದಿಯ ನಿವಾಸಿಗಳು ತಿಳಿಸಿದ್ದಾರೆ.
ಡಿ.27ರಂದು ಬೆಳಗ್ಗೆ ರಾಮಸಮುದ್ರದ ನಾಯಕರ ಬೀದಿಯ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಕಳೆದ ಮೂರು ತಿಂಗಳಿಂದ ಚರಂಡಿ, ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿ, ಈಗ ನಡೆದಿರುವ ಚರಂಡಿ ಕಾಮಗಾರಿಯನ್ನು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಯಾಗಬೇಕು. ಕಳಪೆ ಕಾಮಗಾರಿಯಿಂದ ಎಷ್ಟೋ ವೃದ್ಧರು ತೊಂದರೆಗೊಳಗಾಗಿ ಆಸ್ಪತ್ರೆ ಸೇರಿದ್ದಾರೆ. ರೈತ, ಶಾಲಾ ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಗುತ್ತಿಗೆದಾರನೊಬ್ಬ ಚರಂಡಿ ಮಾಡುವ ನೆಪದಲ್ಲಿ ರಸ್ತೆಯನ್ನೇ ಅಗೆದು ರಸ್ತೆಯ ಮೇಲೆ ಚರಂಡಿ ನೀರನ್ನು ಮೂರು ತಿಂಗಳಿಂದ ಹರಿಯ ಬಿಟ್ಟಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಕಾಯಿಲೆಗಳ ಭೀತಿ ಎದುರಾಗಿದೆ ಎಂದು ದೂರಿದ್ದಾರೆ.
ಇತ್ತೀಚೆಗೆ ರಾಮಸಮುದ್ರ ನಾಯಕರ ಬೀದಿಗೆ ಆಗಮಿಸಿದ ಸ್ಥಳೀಯ ಶಾಸಕ ಹಾಗೂ ರಸ್ತೆ ನಿಗಮದ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಹಾಗೂ ಇತರ ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಸ್ಥಳದಲ್ಲಿದ್ದ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಸ್ಥಗಿತಗೊಂಡಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸುಂತೆ ಸೂಚಿಸಿದರೂ ಪ್ರಯೋಜನವಾಗಿಲ್ಲ.
ಜಿಲ್ಲಾಡಳಿತ ಭವನಕ್ಕೆ ವಿಕಲಚೇತನ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಗೀತಾ ಮಹದೇವಪ್ರಸಾದ್‌ರವರಿಗೆ ರಾಮಸಮುದ್ರದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಕಾರಣ ಕೇಳಿ ಕೂಡಲೇ ಸಮಸ್ಯೆ ಬಗೆಹರಿಸಿ ಎಂದು ತಾಕೀತು ಮಾಡಿದ್ದಾರೆ.
ಗುತ್ತಿಗೆದಾರ ಕೆಲ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಕಾಮಗಾರಿಯನ್ನು ತನಗೆ ಇಷ್ಟಬಂದಂತೆ ನಿರ್ವಹಣೆ ಮಾಡುತ್ತಿದ್ದಾರೆ. ಆದ್ದರಿಂದ ನೊಂದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಇನ್ನು ಒಂದು ವಾರದ ಒಳಗಾಗಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದು ಮನವಿ ಪತ್ರ ನೀಡಿದ್ದಾರೆ. ಇಲ್ಲದಿದ್ದರೆ 2018ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ಚಿಂತನೆ ಮಾಡಲಾಗುವುದು ಎಂದು ಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ನಾಯಕರ ಬೀದಿ ನಿವಾಸಿಗಳಾದ ರಮೇಶ್, ಮಣಿ, ಜಿ.ಬಂಗಾರು, ಮುತ್ತು, ಪ್ರದೀಪ್, ಯಜಮಾನ್ ಲಿಂಗರಾಜನಾಯಕ, ನಾಗರಾಜ ನಾಯಕ, ಮುಖಂಡರಾದ ರವಿ, ಕೂಸನಾಯಕ, ಕುಮಾರ್, ರಾಘವೆಂದ್ರ, ದೊಡ್ಡನಾಯಕ, ಶ್ರೀಕಂಠ, ನಾಗೇಶ್ ನಾಯಕ, ವೆಂಕಟನಾಯಕ, ಪ್ರಭುಸ್ವಾಮಿ, ಸಿಎನ್‌ಟಿ ಮಹೇಶ್, ವಿರೂಪಾಕ್ಷ ಮತ್ತಿತರರು ಮನವಿ ಪತ್ರಕ್ಕೆ ಸಹಿ ಹಾಕಲಾಗಿದೆ.







