ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿರಿಸಿ ರಚನೆಯಾಗಿರುವ ಗುಜರಾತ್‌ನ ನೂತನ ಸಂಪುಟ

ಹೊಸದಿಲ್ಲಿ,ಡಿ.27: ಮಂಗಳವಾರ ವಿಜಯ ರೂಪಾನಿ ಅವರು ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಇತರ 19 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದು, ಇದು 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಾಟಿದಾರರು, ಬುಡಕಟ್ಟು ಜನಾಂಗ ಮತ್ತು ಒಬಿಸಿ ಮುಖಗಳೊಂದಿಗೆ ಹಿರಿಯರು ಮತ್ತು ಯುವಕರನ್ನು ಸೇರಿಸಿಕೊಂಡು ಎಚ್ಚರಿಕೆಯಿಂದ ರಚಿಸಲಾಗಿರುವ ಸಚಿವ ಸಂಪುಟ ಎಂದು ವಿಶ್ಲೇಷಿಸಲಾಗಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪಕ್ಷದ ಅಗ್ರಶ್ರೇಣಿಯ ನಾಯಕರು ಭಾಗಿಯಾಗಿದ್ದರು. ರಾಜಧಾನಿ ಗಾಂಧಿನಗರದ ವಿಮಾನ ನಿಲ್ದಾಣದಲ್ಲಿಳಿದ ಬಳಿಕ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಾಡಾಗಿದ್ದ ಸಚಿವಾಲಯ ಮೈದಾನದವರೆಗೆ ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಜನರತ್ತ ಕೈ ಬೀಸುತ್ತ ರೋಡ್ ಶೋ ನಡೆಸಿದ್ದರು.
ಈ ತಾಕತ್ತಿನ ಬೃಹತ್ ಪ್ರದರ್ಶನ ಮತ್ತು ಎಚ್ಚರಿಕೆಯಿಂದ ರಚನೆಗೊಂಡಿರುವ ನೂತನ ಸಚಿವ ಸಂಪುಟ ವಿಧಾನಸಭಾ ಚುನಾವಣೆ ಮುಗಿದಿದೆ ಮತ್ತು ಸತತ ಆರನೇ ಬಾರಿಗೆ ಅಧಿಕಾರಕ್ಕೇರಿರುವ ಬಿಜೆಪಿ ಮೋದಿ ಎರಡನೇ ಅಧಿಕಾರಾವಧಿಯನ್ನು ಕೋರಲಿರುವ 2019ರ ಸಾರ್ವತ್ರಿಕ ಚುನಾವಣೆಗೆ ಈಗಲೇ ಸಜ್ಜಾಗುತ್ತಿದೆ ಎನ್ನುವುದನ್ನು ಬೆಟ್ಟು ಮಾಡಿವೆ. ವಿಧಾನಸಭಾ ಚುನಾವಣೆಯಲ್ಲಿ ತನ್ನ ಗೆಲುವಿನ ಅಂತರ ಗಣನೀಯವಾಗಿ ಕಡಿಮೆ ಯಾಗಿರುವ ಹಿನ್ನೆಲೆಯಲ್ಲಿ ತನ್ನ ಕಾರ್ಯತಂತ್ರವನ್ನು ಪರಿಷ್ಕರಿಸಿಕೊಳ್ಳುವ ಮೂಲಕ 2014ರಲ್ಲಿಯಂತೆ ರಾಜ್ಯದ ಎಲ್ಲ 26 ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಹವಣಿಸಿದೆ.
ಪಕ್ಷವು ಮುಖ್ಯಮಂತ್ರಿಯಾಗಿ ರೂಪಾನಿ ಮತ್ತು ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಅವರನ್ನು ಉಳಿಸಿಕೊಂಡು ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದರೆ, ಹಿಂದಿನ ಸಂಪುಟದಲ್ಲಿದ್ದ 11 ಸಚಿವರು ಮತ್ತೆ ಸ್ಥಾನ ಪಡೆದಿದ್ದಾರೆ. ಒಂಭತ್ತು ಸಚಿವರು ಹೊಸಮುಖಗಳಾಗಿದ್ದಾರೆ. ಬಿಜೆಪಿ ತನ್ನ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಂಡಿರುವ ಸೌರಾಷ್ಟ್ರದ ಏಳು ಸಚಿವರು ಸಂಪುಟದಲ್ಲಿದ್ದಾರೆ.
20 ಸದಸ್ಯ ಬಲದ ಸಂಪುಟದಲ್ಲಿ ಆರು ಸಚಿವರು ಪಾಟಿದಾರ್ ಸಮುದಾಯಕ್ಕೆ ಸೇರಿದ್ದಾರೆ. ಮೀಸಲಾತಿ ವಿಷಯದಲ್ಲಿ ಅಸಮಾಧಾನಗೊಂಡಿರುವ, ಗುಜರಾತಿನ ಮತದಾರರಲ್ಲಿ ಶೇ.14ರಷ್ಟಿರುವ ಈ ಪ್ರಬಲ ಸಮುದಾಯದ ಬೆಂಬಲವನ್ನು ಮತ್ತೊಮ್ಮೆ ಗಟ್ಟಿ ಮಾಡಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಆರು ಸಚಿವರು ಒಬಿಸಿ ಗುಂಪಿಗೆ ಸೇರಿದ್ದಾರೆ. ಇದೂ ಪ್ರಮುಖ ಸಮುದಾಯವಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಇದನ್ನು ಓಲೈಸಲು ಕಾಂಗ್ರೆಸ್ ತೀವ್ರ ಪ್ರಯತ್ನ ನಡೆಸಿತ್ತು.







