ಹನೂರು; ಕುಡುಕರ ಆಶ್ರಯ ತಾಣವಾಗುತ್ತಿರುವ ಪಟ್ಟಣ ಪಂಚಾಯತ್ ಕಟ್ಟಡಗಳು: ಸಾರ್ವಜನಿಕರ ಆಕ್ರೋಶ

ಹನೂರು,ಡಿ.27 : ಹನೂರು ಪಟ್ಟಣ ಪಂಚಾಯತ್ ಮಳಿಗೆÀಗಳು ಕುಡುಕರ ಆವಾಸ ಸ್ಥಾನವಾಗುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶÀಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯತ್ ಕಛೇರಿಗೆ ಹೋಗುವ ಪ್ರವೇಶದ್ವಾರದ ಬಳಿ ಇರುವ ಮೆಟ್ಟಿಲಿನ ಪಕ್ಕದ ಮಳಿಗೆ ಕೊಠಡಿಯೊಂದರಲ್ಲಿ ಸಾರಾಯಿ ಪ್ಯಾಕ್‍ಗಳು ಬಿದ್ದಿದ್ದು, ಪಟ್ಟಣ ಪಂಚಾಯತ್ ಆಡಳಿತವರ್ಗದ ಕಣ್ಣಿಗೆ ಬೀಳುತ್ತಿದ್ದರೂ ಸಹ ಯಾರೂ ತಲೆ ಕೆಡೆಸಿಕೊಂಡಿಲ್ಲ. ಪಟ್ಟಣ ಪಂಚಾಯತ್ ವತಿಯಿಂದ ನಿರ್ಮಿಸಿರುವ ಈ ಬಸ್ ನಿಲ್ದಾಣ ಮತ್ತು ಮಳಿಗೆಗಳು, ಮದ್ಯ ವ್ಯಸನಿಗಳಿಗೆ ಆಶ್ರಯ ತಾಣವಾಗಿದೆ. ಪಟ್ಟಣ ಪಂಚಾಯತ್ ಮಳಿಗೆಯ ಹಿಂದೆ ಇರುವ ಪ್ರಾಥಮಿಕ ಶಾಲಾ ಆವರಣಕ್ಕೆ ಕುಡಿಯಲು ಬರುವವರು ಸಾರಾಯಿ ಬಾಟಲ್‍ಗಳು, ಪ್ಲಾಸ್ಟಿಕ್ ಲೋಟಗಳನ್ನು ಎಸೆಯುತ್ತಿದ್ದಾರೆ ಎಂದು ಪಟ್ಟಣದ ನಾಗರಿಕರು ಆರೋಪಿಸಿದ್ದಾರೆ.
ಬೆರಳಣಿಕೆಷ್ಟು ವಾಣಿಜ್ಯ ಮಳಿಗೆಗಳಿಂದ ಮಾತ್ರ ವ್ಯಾಪಾರ ವಹಿವಾಟು : ಪಟ್ಟಣ ಪಂಚಾಯತ್ ನ ಖಾಸಗಿ ಬಸ್ ನಿಲ್ದಾಣದಲ್ಲಿ ಒಟ್ಟು 34 ಕೊಠಡಿಗಳಿದ್ದು ಇದರಲ್ಲಿ ಬೆರಳೆಣಿಕೆಯಷ್ಟು ಮಳಿಗೆಗಳು ಮಾತ್ರ ತೆರೆದಿದ್ದು, ಮಿಕ್ಕ ಕೊಠಡಿಗಳು ಯಾಕೆ ತೆರೆದಿಲ್ಲ ? ಮೊದಲೇ ಟೆಂಡರ್ ಆದ ಕೊಠಡಿಗಳು ಏನಾದವು ಎಂಬುದು ಪಟ್ಟಣ ನಿವಾಸಿಗಳ ಪ್ರಶ್ನೆಯಾಗಿದೆ. ರಸ್ತೆ ಬದಿಯ ವ್ಯಾಪಾರಿಗಳು ವ್ಯಾಪಾರ ವಹಿವಾಟುಗಳನ್ನು ಮಾಡಲು ಸೂಕ್ತ ಸ್ಥಳವಿಲ್ಲದೆ, ದಿನ ನಿತ್ಯ ಕೂಲಿ ಗಿಟ್ಟಿಸಿಕೂಳ್ಳಲು ಒಂದು ಸೂಕ್ತ ಸ್ಥಳವಿಲ್ಲದೆ ಕೈ ಗಾಡಿಗಳಲ್ಲಿ ಸಂಚರಿಸಿ ದಿನ ಬಳಕೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲ ವ್ಯಾಪಾರಿಗಳಂತೂ ಯಾವಾಗ ಖಾಲಿ ಇರುವ ಮಳಿಗೆಗಳನ್ನು ಮರು ಹರಾಜು ಮಾಡಿ ಹರಾಜುದಾರರಿಗೆ ಹಸ್ತಾಂತರಿಸುತ್ತಾರೋ ಎಂದು ಕಾದು ಕುಳಿತಿದ್ದಾರೆ.







