ಸೋಲಿನಿಂದ ನೋವಾಗಿದೆ, ಶ್ರೇಷ್ಠ ಪ್ರದರ್ಶನ ನೀಡಿದ್ದೇನೆ: ಪಿ.ವಿ ಸಿಂಧು

ಹೊಸದಿಲ್ಲಿ, ಡಿ.27: ‘‘ಕೆಲವು ಟೂರ್ನಿಗಳಲ್ಲಿ ಸೋಲು ಎದುರಾದಾಗ ಮನಸ್ಸಿಗೆ ನೋವಾಗಿದೆ. ಆದರೆ ತಾನು ಪ್ರತಿಯೊಂದು ಪಂದ್ಯದಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ್ದೇನೆ’’ ಎಂದು ಒಲಿಂಪಿಕ್ಸ್ ಮತ್ತು ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಹೇಳಿದ್ದಾರೆ.
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು 2017ರಲ್ಲಿನ ಗೆಲುವು ಮತ್ತು ಸೋಲಿನ ಅನುಭವವನ್ನು ಹಂಚಿಕೊಂಡಿದ್ದಾರೆ.
‘‘ಸೋಲಿನಿಂದ ನೋವಾಗಿದೆ. ಆದರೆ ನಿಕಟ ಪೈಪೋಟಿ ನೀಡಿ ಸೋತಿರುವುದಕ್ಕೆ ಯಾವುದೇ ಬೇಸರವಿಲ್ಲ. ದುಬೈ ಓಪನ್ ಫೈನಲ್ ಒಂದು ರೀತಿ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಂತೆ ಸವಾಲು ಎದುರಾಗಿತ್ತು’’ ಎಂದರು.
ದುಬೈ ಸೂಪರ್ ಸಿರೀಸ್‌ನ ಫೈನಲ್ ಪಂದ್ಯದಲ್ಲಿ ಸ್ಪರ್ಧೆ ಬಹಳ ಹೊತ್ತು ನಡೆಯಿತು. ಜಪಾನ್ ವಿಶ್ವದ ನಂ.2 ಆಟಗಾರ್ತಿ ಅಗಾನೆ ಯಮಗುಚಿ ವಿರುದ್ಧ ಸೋಲು ಅನುಭವಿಸಿ ಮೊದಲ ಬಾರಿ ಚಾಂಪಿಯನ್ ಆಗುವ ಅವಕಾಶವನ್ನು ಸಿಂಧು ಕಳೆದುಕೊಂಡಿದ್ದರು.
‘‘ಸೂಪರ್ ಸಿರೀಸ್‌ನ ಗ್ರೂಪ್ ಹಂತದ ಪಂದ್ಯಗಳಲ್ಲಿ ಸಿಂಧು ಅವರು ಅಗ್ರ ಶ್ರೇಯಾಂಕದ ಆಟಗಾರ್ತಿಯರಿಗೆ ಸೋಲುಣಿಸಿದ್ದರು. ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದ್ದರು. ಆದರೆ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದರು. ಫೈನಲ್ ಪಂದ್ಯದಲ್ಲಿ ಸೋತಿರುವ ಹಿನ್ನೆಲೆಯಲ್ಲಿ ತುಲನೆ ಮಾಡಬಾರದು’’ ಎಂದು ಸಿಂಧು ಕೋಚ್ ಪಿ.ಗೋಪಿಚಂದ್ ಹೇಳಿದ್ದಾರೆ.
‘‘ಈ ಹೊತ್ತು ಸಿಂಧು ಅವರ ಬಗ್ಗೆ ಎಲ್ಲರಿಗೆ ಗೊತ್ತಿದೆ. ಆದರೆ ಈ ಮಟ್ಟಕ್ಕೆ ನಾನು ಬೆಳೆಯಲು ನನ್ನ ಹೆತ್ತವರ ತ್ಯಾಗ ಮತ್ತು ಕಠಿಣ ಪರಿಶ್ರಮ ಕಾರಣ. ಅವರ ಪ್ರೋತ್ಸಾಹ ಇಲ್ಲದೆ ಇರುತ್ತಿದ್ದರೆ ನನಗೆ ಏನನ್ನೂ ಮಾಡಲು ಸಾಧ್ಯವಿರಲಿಲ್ಲ. ಆರಂಭದಲ್ಲಿ ಕಷ್ಟದ ದಿನಗಳನ್ನು ಎದುರಿಸಿದ್ದೆ. ಆಗ ನನಗೆ ಹೆತ್ತವರು ನೆರವಾಗಿದ್ದರು. ನಾನು ಕೇಳಿದ ಎಲ್ಲವನ್ನು ಕೊಡಿಸಿದರು. ಅಭ್ಯಾಸಕ್ಕೆ ನನಗೆ ಎಲ್ಲಿಗೆ ಬೇಕೋ ಅಲ್ಲಿಗೆ ಕರೆದುಕೊಂಡು ಹೋಗಿ ನನಗೆ ಬ್ಯಾಡ್ಮಿಂಟನ್‌ನಲ್ಲಿ ಬೆಳೆಯಲು ಪ್ರೋತ್ಸಾಹ ನೀಡಿದ್ದರು’’ ಎಂದು ಸಿಂಧು ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
‘‘ಗೋಪಿ ಸರ್ ನನಗೆ ಆದರ್ಶಪ್ರಾಯರಾಗಿದ್ದರು. ನಾನು ಆಡಲು ಆರಂಭಿಸಿದಾಗ ಗೋಪಿಚಂದ್ ಪಂದ್ಯವೊಂದನ್ನು ನೋಡಿದೆ. ಇದು ನನ್ನ ಆಟದ ಮೇಲೆ ಪ್ರಭಾವ ಬೀರಿತು. ಬಳಿಕ ಅವರ ಅಕಾಡಮಿ ಸೇರಿದೆ. 10ರ ಹರೆಯದಲ್ಲೇ ನನಗೆ ಕೋಚ್ ಗೋಪಿಚಂದ್ ಅವರ ಮಾರ್ಗದರ್ಶನ ದೊರೆಯಿತು’’ ಎಂದು ಸಿಂಧು ಹೇಳಿದರು.
‘‘ಭಾರತದ ಬ್ಯಾಡ್ಮಿಂಟನ್‌ನಲ್ಲಿ ಈ ವರ್ಷ ಕೆ.ಶ್ರೀಕಾಂತ್ ಭಾರೀ ಯಶಸ್ಸು ಗಳಿಸಿದ್ದಾರೆ. ಅವರು 4 ಸೂಪರ್ ಸಿರೀಸ್ ಪ್ರಶಸ್ತಿಗಳನ್ನು ಜಯಿಸಿ ದಾಖಲೆ ನಿರ್ಮಿಸಿದ್ದಾರೆ.ಕಳೆದ ವರ್ಷಕ್ಕಿಂತ ಈ ವರ್ಷ ಅವರು ಉತ್ತಮ ಸಾಧನೆ ಮಾಡಿದ್ದಾರೆ’’ ಎಂದು ಪಿ.ಗೋಪಿಚಂದ್ ಅಭಿಪ್ರಾಯಪಟ್ಟಿದ್ದಾರೆ.







