ಶಿವಮೊಗ್ಗ: ಮೂವರು ಮನೋ ವಿಜ್ಞಾನಿಗಳಿಗೆ ಮಾನಸ ರಾಷ್ಟ್ರೀಯ ಪುರಸ್ಕಾರ

ಶಿವಮೊಗ್ಗ, ಡಿ.28 : ನಗರದ ಮಾನಸ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ ಡಾ. ಕೆ. ಎ. ಅಶೋಕ ಪೈ ಸಂಸ್ಮರಣೆಯಲ್ಲಿ, ಪ್ರತೀ ವರ್ಷ ಮನೋ ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಒಬ್ಬ ಹಿರಿಯ ಸಾಧಕರು ಹಾಗೂ ಯುವ ಸಾಧಕರೋರ್ವರಿಗೆ ರಾಷ್ಟ್ರೀಯ ಪುರಸ್ಕಾರವರನ್ನು ನೀಡಲುದ್ದೇಶಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರಜನಿ ಎ. ಪೈರವರು ಮಾಹಿತಿ ನೀಡಿದರು. ಡಾ. ಅಶೋಕ ಪೈ ಅವರು ಮನೋ ವಿಜ್ಞಾನ, ವೈದ್ಯ ಸಾಹಿತ್ಯ, ಚಲನಚಿತ್ರ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಶಿವಮೊಗ್ಗೆಯ ಒಟ್ಟಾರೆ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಶಿವಮೊಗ್ಗವನ್ನು ಗಮನಿಸುವಂತೆ ಮಾಡುವಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠ ಸಾಧಕರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ, ಗೌರವಿಸಬೇಕು. ಈ ಮೂಲಕ ಯುವ ಪೀಳಿಗೆಗೆ ಸಾಧಕರ ಸಾಧನೆ ಮಾರ್ಗದರ್ಶಿಯಾಗಬೇಕು ಎಂಬುದು ಇವರ ಕನಸಾಗಿತ್ತು ಎಂದರು.
ಈ ಕನಸನ್ನು ಈಗ ಮಾನಸ ಟ್ರಸ್ಟ್ ಸಾಕಾರಗೊಳಿಸುತ್ತಿದ್ದು, ಈ ವರ್ಷ ಇಬ್ಬರು ಹಿರಿಯ ಶ್ರೇಷ್ಠ ಸಾಧಕರಿಗೆ ಜೀವಮಾನ ಸಾಧನೆಗಾಗಿ ಹಾಗೂ ಒಬ್ಬ ಯುವ ಸಾಧಕರಿಗೆ ಒಟ್ಟು ಮೂರು ರಾಷ್ಟ್ರೀಯ ಪುರಸ್ಕಾರಗಳನ್ನು ನೀಡುವುದರ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಮುಂದಾಗಿದೆ ಎಂದರು.
ಈ ಪುರಸ್ಕಾರದ ಆಯ್ಕೆಗಾಗಿ ರಾಜ್ಯದ ಗಣ್ಯ ತೀರ್ಪುಗಾರರ ತಂಡವನ್ನು ರಚಿಸಲಾಗಿತ್ತು. ಈ ತಂಡವು 2016 ರ ಸಾಲಿನ ಜೀವಮಾನ ಸಾಧನೆಗಾಗಿ ಹೆಸರಾಂತ ಮನೋವೈದ್ಯ ಚೆನ್ನೈನ ಡಾ. ಕಿಶೋರ್‍ಕುಮಾರ್, ಧಾರವಾಡದ ಡಾ. ಆನಂದ ಪಾಂಡುರಂಗಿ, ಕಿರಿಯ ಸಾಧಕ ಮಹಾರಾಷ್ಟ್ರದ ಸತಾರಾದ ಡಾ. ಹಮೀದ್ ಧಾಬೋಲ್ಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳನ್ನು ಡಿ. 30ರಂದು ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ. ಜೋಗನ್ ಶಂಕರ್ ಪ್ರದಾನ ಮಾಡಲಿರುವರು ಎಂದು ವಿವರಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲೇ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಕಟೀಲು ಅಪ್ಪುರಾವ್ ಪೈ ಸ್ಮಾರಕ ದತ್ತಿ ಉಪನ್ಯಾಸವನ್ನೂ ಸಹ ಏರ್ಪಡಿಸಲಾಗಿದೆ. ಡಿ. 30ರ ಸಂಜೆ 5:30ಕ್ಕೆ ದತ್ತಿ ಉಪನ್ಯಾಸವನ್ನು ಸಂಸ್ಕತಿ, ಜ್ಞಾನದ ಕುರಿತು ಭಾಷಾತಜ್ಞ, ಚಿಂತಕ ಮತು ಬರೆಹಗಾರ ಧಾರವಾಡದ ಪ್ರೊ. ಗಣೇಶ್ ದೇವಿ ನಡೆಸಿಕೊಡುವರು.
ದಕ್ಷಿಣಾಯಣ ಎನ್ನುವ ಚಳವಳಿಯನ್ನು ಹುಟ್ಟುಹಾಕಿರುವ ದೇವಿ ಅವರು, ಪದ್ಮಶ್ರೀ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾರ್ಕ್ ಬರೆಹಗಾರರ ಪ್ರಶಸ್ತಿ, ವಿಶ್ವ ಪ್ರಸಿದ್ಧ ಪ್ರಿನ್ಸ್ ಕ್ಲಾಸ್ ಅವಾರ್ಡ್, ಲಿಂಗ್ವಾಪೆಕ್ಸ್ ಅವರ್ಡ್‍ಗೆ ಭಾಜನರಾಗಿದ್ದಾರೆ. ಗೋಷ್ಠಿಯಲ್ಲಿ ಪ್ರೊ. ರಾಜೇಂದ್ರ ಚೆನ್ನಿ ಹಾಜರಿದ್ದರು.







