ಬಿಎಂಟಿಸಿ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ
ಬೆಂಗಳೂರು, ಡಿ.28: ಬಿಎಂಟಿಸಿ ಬಸ್‌ಗಳಲ್ಲಿ ನಗದುರಹಿತ ಪ್ರಯಾಣ ಮಾಡಲು ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಇ-ಪರ್ಸ್ ವ್ಯವಸ್ಥೆ ಜಾರಿಗೆ ತಂದಿದ್ದು, ಪ್ರಾಯೋಗಿಕವಾಗಿ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭಿಸಿದೆ.
335 ಇ ಮಾರ್ಗಕ್ಕೆ ಅನ್ವಯವಾಗುವಂತೆ ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು ಟಿಟಿಎಂಸಿ ಮತ್ತು ಐಟಿಪಿಎಲ್ ಟಿಟಿಎಂಸಿಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣಾ ಕೇಂದ್ರಗಳನ್ನು ತೆರೆದಿದೆ. ಪ್ರಯಾಣಿಕರು 25 ರೂ. ಪಾವತಿಸಿ ಸ್ಮಾರ್ಟ್ ಕಾರ್ಡ್ ಖರೀದಿಸಿದರೆ 3 ವರ್ಷದವರೆಗೆ ಬಳಸಬಹುದಾಗಿದೆ. ತಿಂಗಳಿಗೆ ಗರಿಷ್ಠ 10 ಸಾವಿರ ರೂ. ರೀಚಾರ್ಜ್ ಮಾಡಿಸಬಹುದು ಎಂದು ಬಿಎಂಟಿಸಿ ತಿಳಿಸಿದೆ.
ಇ-ಪರ್ಸ್ ಯೋಜನೆಯ ಸ್ಮಾರ್ಟ್ ಕಾರ್ಡ್‌ಗಳನ್ನು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಲು ಉಪಯೋಗಿಸುವ ಜತೆಗೆ, ಇನ್ನಿತರ ಖರೀದಿಗೆ ಬಳಸಬಹುದಾಗಿದೆ.
ಒಂದು ತಿಂಗಳ ಪ್ರಾಯೋಗಿಕ ಪರೀಕ್ಷೆ ನಂತರ, ಪ್ರಯಾಣಿಕರ ದಟ್ಟಣೆ, ನಿರ್ವಾಹಕ ಸ್ಮಾರ್ಟ್ ಕಾರ್ಡ್ ಬಳಸಿ ಟಿಕೆಟ್ ವಿತರಿಸಲು ತೆಗೆದುಕೊಳ್ಳುವ ಸಮಯ ಜನರ ಪ್ರತಿಕ್ರಿಯೆ ಆಧಾರದ ಮೇಲೆ, ಮೇ ತಿಂಗಳ ಅಂತ್ಯದ ವೇಳೆಗೆ ಎಲ್ಲ ಮಾರ್ಗದ ಸಂಚಾರ ಮಾರ್ಗದಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







