ಶೀಘ್ರದಲ್ಲಿಯೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ: ಸಂಪತ್‌ರಾಜ್
ಬೆಂಗಳೂರು, ಡಿ.28: ಬೀದಿ ಬದಿ ವ್ಯಾಪಾರ ಕೂಡ ಕಾನೂನು ಬದ್ಧವಾಗುವ ದಿನಗಳು ಹತ್ತಿರವಾಗಿದ್ದು, ಅತಿ ಶೀಘ್ರದಲ್ಲಿಯೇ ಗುರುತಿನ ಚೀಟಿ ದೊರೆಯಲಿದೆ ಎಂದು ಬಿಬಿಎಂಪಿ ಮೇಯರ್ ಸಂಪತ್‌ರಾಜ್ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ 8 ವಲಯಗಳ ಅಧಿಕಾರಿಗಳ ಸಭೆ ನಡೆಸಿ ಆದಷ್ಟು ಬೇಗ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಎಂಟು ವಲಯಗಳಲ್ಲೂ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದೆ. 20 ರಿಂದ 25 ಸಾವಿರ ಬೀದಿ ಬದಿ ವ್ಯಾಪಾರಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇವರೆಲ್ಲರಿಗೂ ಗುರುತಿನ ಚೀಟಿ ಸಿಕ್ಕಿದ ಕೂಡಲೇ ಇವರು ಪೊಲೀಸರಿಗೆ ಹೆದರದೆ ಕಾನೂನು ಬದ್ಧವಾಗಿಯೇ ವ್ಯಾಪಾರ ಮಾಡಬಹುದಾಗಿದೆ.
ಎಷ್ಟು ಮಂದಿ ಬೀದಿ ಬದಿ ವ್ಯಾಪಾರಿಗಳಿದ್ದಾರೆ ಎಂಬ ಬಗ್ಗೆ ಕರಡು ಪ್ರತಿ ಸಿದ್ಧಪಡಿಸಿ ಸಾರ್ವಜನಿಕ ಆಕ್ಷೇಪಣೆಗೆ ಇಡಬೇಕಿದೆ. ಈ ಆಕ್ಷೇಪಣೆಗಳೆಲ್ಲಾ ಬಂದು ಇದನ್ನು ಪರಿಶೀಲಿಸಿದ ನಂತರ ಈ ಎಲ್ಲ ವ್ಯಾಪಾರಿಗಳಿಗೂ ಗುರುತಿನ ಚೀಟಿ ವಿತರಣೆಯಾಗಲಿದೆ.
ಮೂಲಭೂತ ಸೌಕರ್ಯ: ಈ ಹಿಂದೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಶಿವರಾಜ್ ಅವರು ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 2 ಕೋಟಿ ಅನುದಾನ ನಿಗದಿ ಪಡಿಸಿದ್ದರು. ಆ ನಿಧಿ ಇನ್ನೂ ಬಳಕೆಯಾಗಿಲ್ಲ. ಈ ಬಾರಿಯ ಬೆಟ್‌ನಲ್ಲಿ ಈ ನಿಧಿ ಮುಂದುವರೆಯಲಿದೆ.
ಈ ಅನುದಾನದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಶೆಲ್ಟರ್ ಕಲ್ಪಿಸಿಕೊಡಬೇಕು, ವ್ಯಾಪಾರ ಮಾಡುವ ಸ್ಥಳದಲ್ಲಿ ಶೌಚಾಲಯ, ಕುಡಿಯುವ ನೀರು ದೊರಕುವಂತೆ ಮಾಡಬೇಕು ಹಾಗೂ ಗೋದಾಮು ನಿರ್ಮಿಸಿ ಕೊಡಬೇಕೆಂದು ಬೀದಿ ಬದಿ ವ್ಯಾಪಾರಿಗಳ ಪರ ಹೋರಾಟಗಾರ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಚುನಾವಣೆಗೂ ಮುನ್ನ ಗುರುತಿನ ಚೀಟಿ: ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಚುನಾವಣೆಗೂ ಮುನ್ನವೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ಪೂರ್ಣಗೊಳಿಸಬೇಕೆಂದು ಮೇಯರ್ ಸಂಪತ್‌ರಾಜ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಮೇಯರ್ ಆದೇಶದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಗುರುತಿನ ಚೀಟಿ ವಿತರಣೆಗೆ ಎಲ್ಲ ಕ್ರಮ ಕೈಗೊಂಡಿದ್ದು, ಜನವರಿ ಅಂತ್ಯದೊಳಗೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ದೊರೆಯುವುದು ಖಚಿತ. ಯಾವುದೆ ಆತಂಕವಿಲ್ಲದೆ ಇನ್ನು ಮುಂದೆ ಅವರು ವ್ಯಾಪಾರ ಮಾಡಬಹುದಾಗಿದೆ.







