ಶಿಕ್ಷಕ ವೃತ್ತಿ ಉನ್ನತವಾದ ಹುದ್ದೆ: ಡಾ.ವಿ.ಸುದೇಶ್
ಬೆಂಗಳೂರು, ಡಿ.28: ಶಿಕ್ಷಕ ವೃತ್ತಿಗಿಂತ ಉನ್ನತವಾದ ಹುದ್ದೆ ಯಾವುದೂ ಇಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವಿ.ಸುದೇಶ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಸಸ್ಯಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ಆಯೋಜಿಸಿದ್ದ ಎಂಎಸ್ಸಿ ಜೀವಶಾಸ್ತ್ರ ವಿಭಾಗದ 1977-79 ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸದೃಢ ಸಮಾಜ ನಿರ್ಮಾಣದಲ್ಲಿ ಅಧ್ಯಾಪಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ತಮ್ಮ ಶೈಕ್ಷಣಿಕ ಅವಧಿಯಲ್ಲಿ ದೊರೆತ ಅತ್ಯುತ್ತಮ ಶಿಕ್ಷಕರ ನೆರವಿನಿಂದ ನಾನಿಂದು ಉನ್ನತ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದರು.
ಕುಲಸಚಿವ ಬಿ.ಕೆ.ರವಿ ಮಾತನಾಡಿ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಪಾರವಾದ ಕೊಡುಗೆ ನೀಡಿದೆ. ಇಲ್ಲಿ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ರಾಷ್ಟ್ರದ ಹಲವು ಸ್ಥಳಗಳಲ್ಲಿ ಕನ್ನಡ ಧ್ವಜ ಹಾರಿಸುತ್ತಿದ್ದಾರೆ. ಈ ಮೂಲಕ ರಾಜ್ಯದ ಹಾಗೂ ವಿಶ್ವವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ನುಡಿದರು.
ದಶಕಗಳ ನಂತರ ಪಾಠ ಕಲಿಸಿದ ಗುರುಗಳನ್ನು ನೆನೆಯುವ ಮೂಲಕ ಅವರನ್ನು ಸನ್ಮಾನಿಸಿ ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಿದ್ದಾರೆ. ಇದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಗುರುವಿಲ್ಲದೆ ಗುರುವನ್ನು ಹುಡುಕುವುದು ಕಡಿದಾದ ಕಾಡಿನಲ್ಲಿ ರಸ್ತೆಯನ್ನು ಹುಡುಕಿದಂತಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರುಗಳಾದ ಸಿ.ಕಾಮೇಶ್ವರ ರಾವ್, ಪ್ರೊ.ಶ್ರೀಪಾದ ಎನ್ ಅಗಶೆ, ಪ್ರೊ.ಡಿ.ಜಿ. ಕೃಷ್ಣಪ್ಪ, ಪ್ರೊ.ನಿಜಲಿಂಗಪ್ಪ, ಪ್ರೊ.ಜಯಚಂದ್ರ, ಪ್ರೊ.ಶಂಕರ್ ಭಟ್ ಸುಳ್ಯ, ಪ್ರೊ.ಎಂ.ಸಿ.ಗಾಯತ್ರಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಲ್.ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.







