ಮಂಗಳೂರಿನಲ್ಲಿ ಶೂಟೌಟ್ ಪ್ರಕರಣ: ಇಬ್ಬರು ಆರೋಪಿಗಳ ಸೆರೆ
ಸಿಸಿಬಿ ಪೊಲೀಸ್ ಕಾರ್ಯಾಚರಣೆ

ಮಂಗಳೂರು, ಡಿ. 28: ನಗರದಲ್ಲಿ ಭೂಗತ ಪಾತಕಿ ಕಲಿ ಯೋಗೀಶ್ ನ ಸಹಚರರಿಂದ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಮಂಗಳೂರು ನಗರದಲ್ಲಿ ಇತ್ತೀಚೆಗೆ ಭೂಗತ ಪಾತಕಿ ಕಲಿ ಯೋಗೀಶ್ ಎಂಬಾತನು ತನ್ನ ಸಹಚರರಿಂದ ನಡೆಸಿದ್ದಾನೆ ಎನ್ನಲಾದ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಲ್ಕಿ ನಿವಾಸಿ ಮನೋಜ್ ಕುಂದರ್ ಯಾನೆ ಮಂಜು (35), ಪಕ್ಷಿಕೆರೆ ನಿವಾಸಿ ಚಂದ್ರಶೇಖರ ಯಾನೆ ಟಿಕ್ಕಿ ಅಣ್ಣು (32) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದ್ದು, ಅವರಿಂದ 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಕರಣಗಳ ವಿವರ
ಆರೋಪಿಗಳು ಡಿ. 7ರಂದು ರಾತ್ರಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಶ್ರೀ ರಾಜಶ್ರೀ ಜ್ಯುವೆಲರ್ಸ್ ನಲ್ಲಿ ನಡೆಸಿದ ಶೂಟೌಟ್ ಪ್ರಕರಣ, ಡಿ. 8ರಂದು ರಾತ್ರಿ ಮಂಗಳೂರು ಕಾರ್ ಸ್ಟ್ರೀಟ್ ನಲ್ಲಿರುವ ಎಂ. ಸಂಜೀವ ಶೆಟ್ಟಿ ಬಟ್ಟೆ ಮಳಿಗೆಯ ಕೆಲಸದವರಾದ ಮಹಾಲಿಂಗ ನಾಯ್ಕ್ ಎಂಬವರ ಕಾಲಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ ಮತ್ತು ಡಿ. 23ರಂದು ಮುಲ್ಕಿ ಬಳಿಯ ನಾಗರಾಜ್ ಎಂಬವರ ಮನೆಯ ಕಿಟಿಕಿಗೆ ಹಾಗೂ ಅವರ ಕಾರಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ ನಡೆದಿತ್ತು. ಆರೋಪಿಗಳ ಪೈಕಿ ಮನೋಜ್ ಕುಂದರ್ ಭೂಗತ ಪಾತಕಿ ಕಲಿ ಯೋಗೀಶ್ ಜೊತೆ ನೇರವಾಗಿ ಸಂಪರ್ಕದಲ್ಲಿದ್ದು, ಈತನ ಅದೇಶದಂತೆ ಈ ಮೇಲ್ಕಂಡ ಕೃತ್ಯಗಳನ್ನು ಎಸಗಿರುವುದಾಗಿದೆ ತಿಳಿದುಬಂದಿದೆ.
ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮುಲ್ಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. ಈ ಆರೋಪಿಗಳು ಇನ್ನು ಹಲವು ಕೃತ್ಯಗಳನ್ನು ನಡೆಸಿರುವ ಬಗ್ಗೆ ಮಾಹಿತಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶಾಂತರಾಮ್, ಪಿಎಸ್ಐ ಶ್ಯಾಮ್ ಸುಂದರ್, ಎಎಸ್ ಐ ಹರೀಶ್ ಹಾಗೂ ಸಿಬ್ಬಂದಿ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿ ಸೋಜಾ, ತೇಜಕುಮಾರ್ ಹಾಗೂ ರಿತೇಶ್ ಅವರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.







