ಶತಮಾನಕ್ಕೊಬ್ಬ ಕವಿ ಕುವೆಂಪು: ನಿವೃತ್ತ ನ್ಯಾ.ಎ.ಜೆ.ಸದಾಶಿವ
ಬೆಂಗಳೂರು, ಡಿ. 28: ಮನುಷ್ಯ ಜಾತಿ ತಾನೊಂದೆ ವಲಂ ಎಂಬ ವಿಶ್ವ ಮಾನವ ಸಂದೇಶ ಸಾರಿದ ಪಂಪನ ನಂತರ ಹುಟ್ಟಿದ ಶತಮಾನದ ಕವಿ ಕುವೆಂಪು. ಇಂತವರ ಜನನದಿಂದಾಗಿ ನಾಡು, ನುಡಿಗೆ ಕೀರ್ತಿ ಬಂದಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾ.ಎ.ಜೆ.ಸದಾಶಿವ ಅಭಿಮಾನಪಟ್ಟರು.
ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾರತೀಯ ಅಂಚೆ ಇಲಾಖೆ ನಗರದ ನಯನ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪುರಸ್ಕಾರ ಬಂದ ಸುವರ್ಣ ಮಹೋತ್ಸವದ ನೆನಪಿನಲ್ಲಿ ಕುವೆಂಪು ಸಾಹಿತ್ಯದ ವಿವರಗಳನ್ನೊಳಗೊಂಡ ‘ವಿಶೇಷ ಅಂಚೆ ಲಕೋಟೆ ಬಿಡುಗಡೆ’ಗೊಳಿಸಿ ಅವರು ಮಾತನಾಡಿದರು.
ರಾಷ್ಟ್ರಕವಿ ಕುವೆಂಪು ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ನಮ್ಮ ಹೆಮ್ಮೆ. ಅವರ ಸಾಹಿತ್ಯ ಕೇವಲ ಅಕ್ಷರಗಳಲ್ಲ, ದಾರಿ ದೀಪಾಗಳಾಗಿವೆ. ಅವರ ವಿದ್ವತ್ತನ್ನು ಕಂಡು ಅವರ ಗುರುಗಳು ನಿಬ್ಬೆರಗಾಗುತ್ತಿದ್ದರು. ಅಂತಹ ಮಹಾನ್ ಸಾಹಿತಿಗಳು ಭೂಮಿಯ ಮೇಲೆ ಆಗಾಗ ಜನ್ಮತಾಳುವುದಿಲ್ಲ. ಶತಮಾನಕ್ಕೊಬ್ಬ ಮಾತ್ರ ಹುಟ್ಟಲು ಸಾಧ್ಯವೆಂದು ಅವರು ಸ್ಮರಿಸಿದರು.
ತಮ್ಮ ವೈಚಾರಿಕ ಚಿಂತನೆಗಳನ್ನು ದಿಟ್ಟವಾಗಿ ಪ್ರತಿಪಾದಿಸುತ್ತಿದ್ದರು. ತಮ್ಮ ಸಾಹಿತ್ಯದ ಪ್ರತಿಫಲವಾಗಿ ಏನನ್ನೂ ಬಯಸಿದವರಲ್ಲ. ಆತ್ಮರತಿಗೆ ನಿರಂಕುಶ ಮತಿಗಳಾಗಿ ಎಂಬ ಅವರ ಹೇಳಿಕೆ ದೊಡ್ಡ ವಿವಾದಕ್ಕೆ ಈಡಾಗಿದ್ದರೂ ತಮ್ಮ ಮಾತನ್ನು ಹಿಂದಕ್ಕೆ ಪಡೆದವರಲ್ಲ. ಮುಂದಿನ ತಲೆಮಾರನ್ನು ಬೆಳೆಸುವುದರಲ್ಲಿ, ಚಿಂತನಾಶೀಲರನ್ನಾಗಿ ಮಾಡುವುದರಲ್ಲಿ ಅವರ ಸಾಹಿತ್ಯ ಬಹಳಷ್ಟು ಉಪಯುಕ್ತವಾಗಲಿದೆ ಎಂದು ಅವರು ಹೇಳಿದರು.
ತಮ್ಮ ಸಾಹಿತ್ಯದ ಮೂಲಕ ಕನ್ನಡ ನಾಡು, ನುಡಿಗಾಗಿ ಅಪಾರ ಕೊಡುಗೆ ನೀಡಿದ ಕುವೆಂಪುರವರಿಗೆ ಸಲ್ಲಬೇಕಾದ ಸಂಪೂರ್ಣ ಗೌರವ ಇಂದಿಗೂ ಸಲ್ಲಲಿಲ್ಲ ಎಂಬ ಬೇಸರ ನನಗಿದೆ. ಅವರ ಚಿಂತನೆ ಹಾಗೂ ಬರವಣಿಗೆಯನ್ನು ವಿವಾದಕ್ಕೀಡು ಮಾಡುತ್ತಾ ಬರಲಾಗಿತ್ತು. ಇಂದಿಗೂ ಅವರ ಸಾಹಿತ್ಯ ವಿವಾದಗಳಿಂದ ಮುಕ್ತವಾಗಿಲ್ಲ. ಈ ವಿವಾದಗಳು ಏನೇ ಆಗಿದ್ದರೂ ಅವರು ನಮ್ಮ ನಾಡಿನ ಶ್ರೇಷ್ಠ ಸಾಹಿತಿ ಎಂಬುದನ್ನು ನಾವೆಲ್ಲರೂ ಅರಿಯಬೇಕು ಎಂದು ಅವರು ಆಶಿಸಿದರು.
ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ ಮಾತನಾಡಿ, ರಸ ಋಷಿ ಕುವೆಂಪು 20ನೆ ಶತಮಾನದ ಸಾಹಿತ್ಯದ ಕ್ಷೇತ್ರದ ಅತ್ಯುನ್ನತ ಶಿಖರ. ಅವರ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಂಡಿದೆ. ರಾಜ್ಯದ ಪ್ರತಿಯೊಬ್ಬರು ವಿಶ್ವ ಮಾನವ ಸಂದೇಶವನ್ನು ಅರಿಯಬೇಕೆಂದು ಅವರು ಸದಾ ಬಯಸುತ್ತಿದ್ದರು ಎಂದು ತಿಳಿಸಿದರು.
ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ಯಾವುದೇ ಜಾತಿ, ಧರ್ಮ, ಭಾಷೆ ಹಾಗೂ ಪ್ರದೇಶದಲ್ಲಿ ಹುಟ್ಟಿದ ಮನುಷ್ಯ ಮಾನವೀಯ ವೌಲ್ಯಗಳನ್ನು ಅಳವಡಿಸಿಕೊಂಡು ವಿಶ್ವ ಮಾನವನಾಗುವುದು ಹೇಗೆ ಎಂಬುದನ್ನು ಕುವೆಂಪು ಸಾಹಿತ್ಯ ನಮಗೆ ತೋರಿಸಿಕೊಟ್ಟಿದೆ. ಅವರ ಸಾಹಿತ್ಯ ಕೇವಲ ನಾಡಿಗೆ, ದೇಶಕ್ಕೆ ಸೀಮಿತವಲ್ಲ. ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಾಹಿತ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಅಂಚೆ ಸೇವೆಯ ಪೋಸ್ಟ್ ಮಾಸ್ಕರ್ ಕರ್ನಲ್ ಅರವಿಂದ್ ವರ್ಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ಮತ್ತಿತರರಿದ್ದರು.
ರಾಷ್ಟ್ರಕವಿ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕ 50ವರ್ಷಗಳ ನೆನಪಿಗೋಸ್ಕರ ಭಾರತೀಯ ಅಂಚೆ ಇಲಾಖೆ ಕುವೆಂಪು ಭಾವಚಿತ್ರ ಹಾಗೂ ಶ್ರೀರಾಮಾಯಣ ದರ್ಶನಂ ಕೃತಿಯ ಕುರಿತು ಮಾಹಿತಿಯನ್ನೊಳಗೊಂಡ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗಿದೆ. ಈ ಅಂಚೆ ಲಕೋಟೆಯ ಬೆಲೆ 25 ರೂ.ಆಗಿದೆ.







