ಕೊಳ್ಳೇಗಾಲ: ಕಾಡಾನೆ ದಾಳಿ; ರೈತನಿಗೆ ಗಾಯ
ಕೊಳ್ಳೇಗಾಲ, ಡಿ.28: ಜಮೀನಿನ ಜೋಳದ ಮೆದೆಯನ್ನು ಕಾಯುವುದಕ್ಕೆ ತೆರಳಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ತಾಲ್ಲೂಕಿನ ಬೈಲೂರು ಅರಣ್ಯ ಪ್ರದೇಶದ ಬಳಿ ನಡೆದಿದೆ.
ತಾಲ್ಲೂಕಿನ ಒಡೆಯರಪಾಳ್ಯ ಸಮೀಪದ ಕೆರೆದೊಡ್ಡಿ ಗ್ರಾಮದ ನಿವಾಸಿ ಕುರ್ಜ ಎಂಬವರು ಕಾಡಾನೆ ದಾಳಿಯಿಂದ ಗಾಯಗೊಂಡಿದ್ದಾರೆ. ಇವರನ್ನು ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುಮಲ್ಲಪ್ಪನದೊಡ್ಡಿ ಗ್ರಾಮದಲ್ಲಿ ಸ್ವಾಮಿ ಎಂಬವರಿಗೆ ಸೇರಿದ ಜಮೀನನ್ನು ಗುತ್ತಿಗೆ ಪಡೆದು ಜೋಳದ ಫಸಲು ಬೆಳೆದಿದ್ದ ರೈತ ಕುರ್ಜ ನಿನ್ನೆ ರಾತ್ರಿ ಜಮೀನಿನಲ್ಲಿ ದಾಸ್ತಾನು ಮಾಡಿದ್ದ ಜೋಳದ ಮೆದೆ ಕಾಯಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಕಾಡಾನೆ ಮೆದೆಯತ್ತ ಮೇವು ಮೇಯಲು ಬಂದ ವೇಳೆ ಬ್ಯಾಟರಿ ಹಿಡಿದ ರೈತನಿಗೆ ಸೊಂಡಿಲಿನಿಂದ ಹಠಾತ್ ದಾಳಿ ಮಾಡಿದೆ. ಇಂದು ಬೆಳಗ್ಗೆ ಜಮೀನಿನ ಬಳಿ ಇತರ ರೈತರು ತೆರಳಿದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದ ಕುರ್ಜರನ್ನು ಕಂಡು ಆಸ್ಪತ್ರೆಗೆ ಸಾಗಿಸಿದರು. ತಾಲ್ಲೂಕಿನ ಬೈಲೂರು ಅರಣ್ಯ ವಲಯ ಅಧಿಕಾರಿ ನದಾಫ್ ಆಸ್ಪತ್ರೆಗೆ ತೆರಳಿ ರೈತನ ಆರೋಗ್ಯ ವಿಚಾರಿಸಿ, ನಂತರ ಈ ಘಟನೆ ಕುರಿತು ಪ್ರಕರಣವನ್ನು ದಾಖಲಿಸಿಕೊಂಡರು.





