ಎಐಎಡಿಎಂಕೆಯಿಂದ 44 ದಿನಕರನ್ ಬೆಂಬಲಿಗರ ಉಚ್ಛಾಟನೆ

ಚೆನ್ನೈ, ಡಿ. 28: ಆರ್‌ಕೆ ನಗರ ಉಪಚುನಾವಣೆ ಸೋಲಿನ ಬಳಿಕ ಬಂಡಾಯ ನಾಯಕ ಟಿಟಿವಿ ದಿನಕರನ್ ಬೆಂಬಲಿಗರ ವಿರುದ್ಧ ಶಿಸ್ತು ಕ್ರಮ ಮುಂದುವರಿಸಿರುವ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ 44 ಮಂದಿಯನ್ನು ಉಚ್ಛಾಟಿಸಿದೆ ಹಾಗೂ ಇಬ್ಬರನ್ನು ಪಕ್ಷದ ಹುದ್ದೆಯಿಂದ ತೆಗೆದು ಹಾಕಿದೆ. 44 ಮಂದಿ ಪದಾಧಿಕಾರಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಎಐಎಡಿಎಂಕೆ ಸಂಚಾಲಕ ಒ. ಪನ್ನೀರ್‌ಸೆಲ್ವಂ ಹಾಗೂ ಸಹ ಸಂಚಾಲಕ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ.
ಶಿಸ್ತು ಕ್ರಮ ಎದುರಿಸಿದವರಲ್ಲಿ ದಿನಕರನ್‌ರ ನಿಷ್ಠಾವಂತ ಬೆಂಬಲಿಗ, ಮಧುರೈಯ ಮೇಲೂರಿನ ಮಾಜಿ ಶಾಸಕ ಆರ್. ಸಾಮಿ ಕೂಡ ಸೇರಿದ್ದಾರೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸರ್ವ ಸದಸ್ಯರ ಮಂಡಳಿಯ ಸದಸ್ಯತ್ವ ಹೊಂದಿರುವವರು ಸೇರಿದಂತೆ ವಿವಿಧ ಹುದ್ದೆಗಳನ್ನು ಹೊಂದಿರುವ ಉಚ್ಛಾಟಿತ ಪದಾಧಿಕಾರಿಗಳ ಹೆಸರನ್ನು ಪನ್ನೀರ್‌ಸೆಲ್ವಂ ಹಾಗೂ ಪಳನಿಸ್ವಾಮಿ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ ಪಕ್ಷದ ಪುದುಕೋಟೈ ಜಿಲ್ಲಾ ಘಟಕದ ಅಧ್ಯಕ್ಷ ಇ.ಎ. ರತ್ನಸಭಾಪತಿ ಹಾಗೂ ವೆಲ್ಲೂರು (ಪಶ್ಚಿಮ) ಘಟಕದ ಕಾರ್ಯದರ್ಶಿ ಆರ್. ಬಾಲಸುಬ್ರಹ್ಮಣ್ಯಂ ಅವರನ್ನು ಕೂಡ ವಜಾಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಪಕ್ಷದ ಸಿದ್ಧಾಂತದ ವಿರುದ್ಧ ವರ್ತಿಸಿದ ಹಾಗೂ ಎಐಐಡಿಎಂಕೆ ಅಗೌರವ ಉಂಟು ಮಾಡಿದವರನ್ನು ಪಕ್ಷದ ಸ್ಥಾನದಿಂದ ವಜಾಗೊಳಿಸಲಾಯಿತು ಎಂದು ಇಬ್ಬರು ನಾಯಕರ ಹೇಳಿಕೆ ತಿಳಿಸಿದೆ.





