ಯುದ್ಧ, ಅತ್ಯಾಚಾರ, ಗುಲಾಮಗಿರಿ: ಮಕ್ಕಳ ಪಾಲಿಗೆ ಮಾರಕವಾದ 2017

ವಾಶಿಂಗ್ಟನ್, ಡಿ.28: ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಮಕ್ಕಳು ಯುದ್ಧಸಮಯದಲ್ಲಿ ಹೋರಾಡಲು, ಆತ್ಮಹತ್ಯಾ ದಾಳಿಕೋರರಾಗಿ ಮತ್ತು ಮಾನವ ಕವಚವಾಗಿ ಬಳಸಲ್ಪಡುತ್ತಾರೆ ಎಂದು ಸಂಯುಕ್ತ ರಾಷ್ಟ್ರದ ಮಕ್ಕಳ ಸಂಸ್ಥೆ ಎಚ್ಚರಿಸಿದೆ.
2017ನ್ನು ಸಂಘರ್ಷಪೀಡಿತ ಪ್ರದೇಶದಲ್ಲಿರುವ ಮಕ್ಕಳ ಪಾಲಿಗೆ ಅತ್ಯಂತ ಭೀಕರ ವರ್ಷ ಎಂದು ವ್ಯಾಖ್ಯಾನಿಸಿರುವ ಯುನಿಸೆಫ್ ಸಂಘರ್ಷದಲ್ಲಿ ತೊಡಗಿರುವ ಪಕ್ಷಗಳು ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಗಾಳಿಗೆ ತೂರಿವೆ ಮತ್ತು ಮಕ್ಕಳು ಪದೇಪದೇ ದಾಳಿಗೊಳಗಾಗುತ್ತಿದ್ದಾರೆ ಎಂದು ಹೇಳಿಕೆ ನೀಡಿದೆ. ಇರಾಕ್, ಸಿರಿಯಾ, ಯೆಮೆನ್, ನೈಜೀರಿಯ, ದಕ್ಷಿಣ ಸುಡಾನ್ ಮತ್ತು ಮ್ಯಾನ್ಮಾರ್ ಮುಂತಾದ ದೇಶಗಳಲ್ಲಿ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಅತ್ಯಾಚಾರ, ಒತ್ತಾಯದ ಮದುವೆ, ಅಪಹರಣ ಮತ್ತು ಗುಲಾಮಗಿರಿಯು ಪ್ರಮುಖ ಯುದ್ಧತಂತ್ರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯುದ್ಧಪೀಡಿತ ಪ್ರದೇಶಗಳಲ್ಲಿ ಇಪ್ಪತ್ತೇಳು ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದಾಗಿ ವರದಿ ತಿಳಿಸಿದೆ. ಉಗ್ರರಿಂದ ಅಪಹರಿಸಲ್ಪಟ್ಟ ಮಕ್ಕಳು ನಂತರ ಭದ್ರತಾ ಪಡೆಗಳ ಕೈಯಲ್ಲೂ ಶೋಷಣೆಗೆ ಒಳಗಾಗುತ್ತಾರೆ. ಇನ್ನು ಕೆಲಮಕ್ಕಳು ಅಪೌಷ್ಠಿಕತೆ ಮತ್ತು ಇತರ ರೋಗಗಳಿಂದ ಭಾದಿತರಾಗುತ್ತಾರೆ ಎಂದು ಯುನಿಸೆಫ್ ತಿಳಿಸಿದೆ. 2017ರಲ್ಲಿ ಮಕ್ಕಳ ಮೇಲಾದ ಪ್ರಮುಖ ಶೋಷಣೆಗಳು;
ನೈಜೀರಿಯ, ಚಡ್, ನಿಗೆರ್ ಮತ್ತು ಕ್ಯಾಮರೂನ್‌ನಲ್ಲಿರುವ ಬೊಕೊಹರಾಮ್ ಉಗ್ರರು 135 ಮಕ್ಕಳನ್ನು ಆತ್ಮಹತ್ಯಾ ಬಾಂಬರ್‌ಗಳಾಗಿ ಪರಿವರ್ತಿಸಿದ್ದರು. 2013ರಿಂದ ಮಧ್ಯ ಆಫ್ರಿಕನ್ ಗಣರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಯುದ್ಧದಲ್ಲಿ ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮತ್ತು ಯುದ್ಧಕ್ಕೆ ಸೇರಿಸುವ ಪ್ರಕ್ರಿಯೆ ಅವ್ಯಾಹತವಾಗಿ ನಡೆಯುತ್ತಿದೆ. ಕಾಂಗೊದ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಉಗ್ರವಾದದ ಹಿಂಸಾಚಾರದಲ್ಲಿ 8,50,000 ಮಕ್ಕಳು ಮನೆಯನ್ನು ಕಳೆದುಕೊಂಡಿದ್ದರೆ, 200 ಆರೋಗ್ಯ ಕೇಂದ್ರಗಳು ಮತ್ತು 400 ಶಾಲೆಗಳ ಮೇಲೆ ದಾಳಿ ನಡೆದಿವೆ.
ಸೊಮಾಲಿಯಾದಲ್ಲಿ 2017ರ ಆರಂಭದ ಹತ್ತು ತಿಂಗಳಲ್ಲಿ 1,800 ಮಕ್ಕಳನ್ನು ಯುದ್ಧದಲ್ಲಿ ಸೇರಿಸಿಕೊಳ್ಳಲಾಗಿದೆ. ಯೆಮೆನ್‌ನಲ್ಲಿ ಮೂರು ವರ್ಷ ನಡೆದ ಯುದ್ಧದಲ್ಲಿ ಕನಿಷ್ಟ ಐದು ಸಾವಿರ ಮಕ್ಕಳು ಸತ್ತಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಮತ್ತು 1.8 ಮಿಲಿಯನ್ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.
ಇರಾಕ್ ಮತ್ತು ಸಿರಿಯಾದಲ್ಲಿ ಮಕ್ಕಳನ್ನು ಮಾನವ ಕವಚಗಳಾಗಿ ಬಳಸಲಾಗಿದ್ದರೆ ಅಫ್ಘಾನಿಸ್ತಾನದಲ್ಲಿ 2017ರ ಆರಂಭದ ಒಂಬತ್ತು ತಿಂಗಳಲ್ಲಿ 700 ಮಕ್ಕಳು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮಕ್ಕಳನ್ನು ವ್ಯವಸ್ಥಿತವಾಗಿ ಹಿಂಸಾಚಾರಕ್ಕೆ ಗುರಿಪಡಿಸಲಾಗುತ್ತಿದೆ ಮತ್ತು ಅವರನ್ನು ಮನೆಗಳಿಂದ ಹೊರದಬ್ಬಲಾಗುತ್ತಿದೆ. ಗಡಿದಾಟಿ ಬಾಂಗ್ಲಾದೇಶಕ್ಕೆ ಓಡಿಸಲ್ಪಟ್ಟಿರುವ 6,50,000 ರೊಹಿಂಗ್ಯಾಗಳ ಪೈಕಿ ಅರ್ಧದಷ್ಟು ಮಂದಿ 18 ವರ್ಷ ವಯಸ್ಸಿನವರಾಗಿದ್ದಾರೆ.
ಅಂತಾರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸುವಂತೆ ಮತ್ತು ಮಕ್ಕಳ ವಿರುದ್ಧದ ಹಿಂಸಾಚಾರವನ್ನು ಕೊನೆಗೊಳಿಸುವಂತೆ ಸಂಘರ್ಷದಲ್ಲಿ ತೊಡಗಿರುವ ಸಂಘಟನೆಗಳಿಗೆ ಯುನಿಸೆಫ್ ಮನವಿ ಮಾಡಿದೆ. ಪೋಪ್ ಫ್ರಾನ್ಸಿಸ್ ನೀಡಿರುವ ಕ್ರಿಸ್ಮಸ್ ಸಂದೇಶದಲ್ಲಿ, ಸಂಘರ್ಷದಿಂದಾಗಿ ಶಾಂತಿ ಮತ್ತು ಭದ್ರತೆ ಅಪಾಯದಲ್ಲಿರುವ ಜಗತ್ತಿನ ಪ್ರತಿ ಪ್ರದೇಶದ ಪ್ರತಿ ಮಕ್ಕಳಲ್ಲೂ ನಾವು ಜೀಸಸ್‌ರನ್ನು ಕಾಣುತ್ತೇವೆ ಎಂದು ತಿಳಿಸಿದ್ದಾರೆ.







