ಫೇಸ್‍ಬುಕ್‍ನಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನ: ಯುವ ಬರಹಗಾರನ ವಿರುದ್ಧ ದೂರು
ಮೈಸೂರು,ಡಿ.28: ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆ ಟೀಕಿಸುವ ಭರದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಫೇಸ್‍ಬುಕ್‍ನಲ್ಲಿ ಬರೆದಿರುವ ಆರೋಪದ ಮೇಲೆ ಯುವ ಸಾಹಿತಿ ಹಾರೋಹಳ್ಳಿ ರವೀಂದ್ರ ವಿರುದ್ಧ ನಗರ ಡಿಸಿಪಿಗೆ ದೂರು ನೀಡಲಾಗಿದೆ.
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರುದ್ಧ ಹಾರೋಹಳ್ಳಿ ರವೀಂದ್ರ ಹಿಂದೂ ದೇವತೆಗಳ ಬಗ್ಗೆ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ 4 ಪುಟದಲ್ಲಿ ಶ್ರೀರಾಮ, ದಶರಥ, ಲಕ್ಷ್ಮಣ, ಸೀತೆ, ಲವ, ಕುಶ, ಕೃಷ್ಣ ಹೀಗೆ ಹಲವಾರು ಹಿಂದೂ ದೇವತೆಗಳು ಪುರತಾನ ಕಾಲದಲ್ಲಿನ ವ್ಯವಸ್ಥೆ ಕುರಿತು ಎಫ್‍ಬಿಯಲ್ಲಿ ಕೆಟ್ಟದಾಗಿ ಬರೆದಿದ್ದಾರೆ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರವಿಂದ ಶರ್ಮಾ, ಪ್ರಧಾನಕಾರ್ಯದರ್ಶಿ ಬಿ.ವಿ.ಗಂಗಾಧರ್, ಸ್ಕಂದಪ್ರಸಾದ್,ಸಾಗರ್, ಸ್ವಾಮಿಗೌಡ, ಸತ್ಯಾನಂದವಿಟ್ಟು, ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ವಿಷ್ಣುವರ್ಧನ ಬಳಿ ರವೀಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾರೋಹಳ್ಳಿ ರವೀಂದ್ರ ನಾನು ಹಿಂದೂ ದೇವತೆಗಳ ಬಗ್ಗೆ ಕೆಟ್ಟದಾಗಿ ಬರೆದಿಲ್ಲ. ಪುರಾತನ ಕಾಲದಲ್ಲಿ ದೇವತೆಗಳೇ ಪ್ರಾಣಿಗಳಿಂದ ಜನ್ಮ ತಾಳಿದ್ದಾರೆ ಎಂಬ ವಿಚಾರ ಇತಿಹಾಸದಲ್ಲಿ ದಾಖಲಾಗಿದೆ. ಹೆಗಡೆ ಅವರಿಗೆ ಇದು ತಿಳಿದಿಲ್ಲವೇ ಎಂಬ ವಿಚಾರ ಹೇಳಲು ಕೆಲವು ದೇವತೆಗಳನ್ನ ಉದಾಹರಣೆಯಾಗಿ ನೀಡಿದ್ದೇನೆ ಅಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾರೆ.





