ನೂತನ ವರ್ಷಾಚರಣೆ ಪ್ರಯುಕ್ತ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ 2ಲಕ್ಷ ಲಾಡು ವಿತರಣೆ

ಮೈಸೂರು, ಡಿ. 28: ನೂತನ ವರ್ಷವನ್ನು ಸಂಭ್ರಮದಿಂದ ಆಚರಿಸಲು ವಿಜಯನಗರದಲ್ಲಿರುವ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಬರುವ ಭಕ್ತರಿಗೆ 2 ಲಕ್ಷ ತಿರುಪತಿ ಮಾದರಿಯ ಲಾಡುಗಳನ್ನು ವಿತರಿಸಲಾಗುವುದು ಎಂದು ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಭಾಷ್ಯಂ ಸ್ವಾಮೀಜಿ ತಿಳಿಸಿದರು.
ತಿರುಪತಿ ಮಾದರಿಯ 2 ಲಕ್ಷ ಲಾಡುಗಳನ್ನ ಭಕ್ತರಿಗೆ ವಿತರಿಸುವ ಮೂಲಕ ಎಲ್ಲರಿಗೂ ನೂತನ ವರ್ಷ ಒಳ್ಳೆಯದನ್ನ ಮಾಡಲಿ ಎಂದು ವಿಶೇಷ ಪೂಜೆ ಮಾಡಲು ದೇವಾಲಯದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ನಗರದ ಪ್ರಸಿದ್ಧ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿದ್ದು, ಬರುವ ಭಕ್ತರಿಗೆ ಲಾಡು ವಿತರಿಸಿ ಹೊಸ ವರ್ಷ ಜೀವನದಲ್ಲಿ ಹೊಸತನ ತರಲಿ ಎಂದು ಶುಭಾಶಯ ಹೇಳಿ ಅವರಿಗೆ ವಿತರಿಸಲು ತಿರುಪತಿ ಮಾದರಿಯ 2 ಲಕ್ಷ ಲಾಡುಗಳನ್ನ ಸಿದ್ಧಪಡಿಸಿಲಾಗುತ್ತಿದೆ.
ಸುಮಾರು 40ಕ್ಕೂ ಹೆಚ್ಚು ಬಾಣಸಿಗರು ಡಿಸೆಂಬರ್ 21 ರಿಂದಲೇ ಹಗಲು-ರಾತ್ರಿ ಲಾಡುಗಳನ್ನು ತಯಾರಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಜನವರಿ 1ರಂದು ಬೆಳಗ್ಗೆ 5ರಿಂದ ರಾತ್ರಿ 11ರ ತನಕ ಪ್ರಸಾದ ವಿತರಣೆ ಕಾರ್ಯ ನಡೆಯಲಿದೆ. ಸಾವಿರಾರು ಮಂದಿ ಭಕ್ತರು ಅಂದು ದೇವಾಲಯಕ್ಕೆ ಬಂದು ದರ್ಶನ ಪಡೆಯುತ್ತಾರೆ. ಅವರೆಲ್ಲರಿಗೂ ಸಂತೃಪ್ತಿಯಾಗುವಷ್ಟು ಪ್ರಸಾದ ಕೊಡಲಾಗುತ್ತದೆ. ಇದೇ ಕಾರಣಕ್ಕೆ ಅಂದು ಸಹಸ್ರಾರು ಭಕ್ತ ಸಮೂಹ ದೇವಾಲಯದತ್ತ ಹರಿದುಬರುತ್ತದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದರೂ ಕಳೆದ 16 ವರ್ಷಗಳಿಂದ ಈ ಸತ್ಕಾರ್ಯ ಮಾಡುವುದನ್ನು ನಿಲ್ಲಿಸಿಲ್ಲ. ಭಕ್ತರೇ ನಮ್ಮೆಲ್ಲಾ ಸತ್ಕಾರ್ಯಗಳನ್ನು ಮುಂದುವರೆಸುತ್ತಿರುವುದಾಗಿ ಸ್ವಾಮೀಜಿ ತಿಳಿಸಿದರು.
ತಿರುಪತಿ ಮಾದರಿಯ 2 ಲಕ್ಷ ಲಾಡುಗಳನ್ನು ತಯಾರಿಸಲು 50 ಮಂದಿ ಬಾಣಸಿಗರು 15 ದಿನಗಳಿಂದ ಶ್ರಮಿಸುತ್ತಿದ್ದಾರೆ. ಮಾಮೂಲಿ ಲಾಡುಗಳೊಂದಿಗೆ ಗಣ್ಯ ವ್ಯಕ್ತಿಗಳಿಗೂ ಪ್ರತ್ಯೇಕ ಲಾಡು ಸಿದ್ಧಗೊಳ್ಳುತ್ತಿವೆ. ಇದಕ್ಕಾಗಿ 1500 ಗ್ರಾಂ ತೂಕದ 5,000 ಲಡ್ಡುಗಳು, 100 ಗ್ರಾಂ ತೂಕದ 2 ಲಕ್ಷ ಲಾಡು ಸಿದ್ಧಗೊಳ್ಳುತ್ತಿವೆ. ಎರಡು ಲಕ್ಷ ಲಾಡು ತಯಾರಿಸಲು 50 ಕ್ವಿಂಟಾಲ್ ಕಡ್ಲೆ ಹಿಟ್ಟು, 100 ಕ್ವಿಂಟಾಲ್ ಸಕ್ಕರೆ, 4000 ಲೀಟರ್ ಖಾದ್ಯ ತೈಲ, 100 ಕೆಜಿ ಗೋಡಂಬಿ, 100 ಕೆಜಿ ಒಣದ್ರಾಕ್ಷಿ, 50 ಕೆಜಿ ಬಾದಾಮಿ, 50 ಕೆಜಿ ಡೈಮಂಡ್ ಸಕ್ಕರೆ, 500 ಕೆಜಿ ಬೂರಾ ಸಕ್ಕರೆ, 10 ಕೆಜಿ ಪಿಸ್ತಾ, 20 ಕೆಜಿ ಏಲಕ್ಕಿ, 20 ಕೆಜಿ ಜಾಕಾಯಿ ಮತ್ತು ಜಾಪತ್ರೆ, 5 ಕೆಜಿ ಪಚ್ಚೆ ಕರ್ಪೂರ, 50 ಕೆಜಿ ಲವಂಗವನ್ನು ಬಳಸಲಾಗುತ್ತಿದೆ.
ಜೊತೆಗೆ 10 ಕ್ವಿಂಟಾಲ್ ಪುಲಿಯೊಗರೆಯನ್ನ ಭಕ್ತರಿಗೆ ವಿತರಿಸಲಾಗುತ್ತಿದ್ದು, ಜಾತಿ, ಮತದ ಸೋಂಕೇ ಇಲ್ಲ. ಲೋಕ ಶಾಂತಿಯಿಂದಿರಬೇಕು. ಸಮಾಜದಲ್ಲಿರುವ ಜಾತಿ, ಮತ, ವರ್ಗದವರೆಲ್ಲರೂ ಸಹಬಾಳ್ವೆಯಿಂದ ಬದುಕಬೇಕೆಂಬ ಆಶಯ ನಮ್ಮದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಆಡಳಿತಾಧಿಕಾರಿ ಶ್ರೀನಿವಾಸ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







