ಮಂಗಳೂರು: ಸಹಿ ಸಂಗ್ರಹದ ವಿರುದ್ಧ ಡಿಡಿಪಿಐಗೆ ಎಸ್‌ಡಿಪಿಐ ಮನವಿ

ಮಂಗಳೂರು, ಡಿ.28: ದ.ಕ.ಜಿಲ್ಲೆಯ ಕೆಲವು ಶಾಲಾ ಕಾಲೇಜುಗಳಲ್ಲಿ ಒಂದು ಧರ್ಮವನ್ನು ಭಾವನಾತ್ಮಕವಾಗಿ ಪ್ರೇರೇಪಿಸುವ ಮತ್ತು ಇನ್ನೊಂದು ಧರ್ಮವನ್ನು ಕೆರಳಿಸುವ ಗೋ ಸಂರಕ್ಷಣೆ ಹಾಗೂ ಗೋಹತ್ಯೆ ನಿಷೇಧ ಪರವಾಗಿ ವಿದ್ಯಾರ್ಥಿಗಳಿಗೆ ಅರಿವು ನೀಡದೆ ಸಹಿಗಳನ್ನು ಪಡೆಯಲಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಎಸ್‌ಡಿಪಿಐ ನಿಯೋಗ ಡಿಡಿಪಿಐಗೆ ಮನವಿ ಸಲ್ಲಿಸಿದೆ.
ಪುತ್ತೂರು ತಾಲೂಕಿನ ಮಾಡನ್ನೂರು ಗ್ರಾಮದ ಪ್ರೌಢ ಶಾಲೆ, ಮುಡಿಪು ಕುರ್ನಾಡು ಕಾಲೇಜಿನಲ್ಲಿ ಈ ತರದ ಘಟನೆಗಳು ನಡೆದಿವೆ. ಈ ಘಟನೆಯಿಂದಾಗಿ ವಿದ್ಯಾಕೇಂದ್ರದೊಳಗಿನ ಶಾಂತಿಯ ವಾತಾವರಣವು ಕದಡುತ್ತಿದ್ದು, ಹಲವು ವಿದ್ಯಾರ್ಥಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೇರೆ ಬೇರೆ ಧರ್ಮದ ವಿದ್ಯಾರ್ಥಿಗಳ ಸಂಗಮವಾಗಿರುವ ವಿದ್ಯಾಕೇಂದ್ರದೊಳಗೆ ಈ ರೀತಿಯ ರಾಜಕೀಯ ಪ್ರೇರಿತ, ಕೋಮುಧ್ರುವೀಕರಣಗೊಳಿಸುವ ವಿಚಾರಗಳನ್ನು ಬಳಸುತ್ತಿರುವುದು ಶಿಕ್ಷಣ ನೀತಿಗೆ ವಿರುದ್ಧವಾಗಿದೆ ಎಂದು ಎಸ್‌ಡಿಪಿಐ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲವು ಕಡೆ ಈ ಕೃತ್ಯದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದವು ಶಾಮೀಲಾಗಿದ್ದು ಕಂಡು ಬಂದಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ. ಇಂತಹ ಘಟನೆಗಳು ಮುಂದುವರಿದಲ್ಲಿ ಕೇವಲ ವಿದ್ಯಾಕೇಂದ್ರದ ಒಳಗಡೆಯಲ್ಲದೆ ಸಮಾಜದಲ್ಲಿಯೂ ಅಶಾಂತಿಯ ವಾತಾವರಣ ಉಂಟಾಗುವ ಅಪಾಯವಿದೆ. ಆದುದರಿಂದ ಶಿಕ್ಷಣ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಿ ಈ ರೀತಿಯ ಸಮಾಜರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿ ಅಶಾಂತಿ ಸೃಷ್ಟಿಸುವವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಅದೇ ರೀತಿ ಎಲ್ಲ ಶಿಕ್ಷಣ ಕೇಂದ್ರಗಳಿಗೆ ಶಿಕ್ಷಣ ಇಲಾಖೆಯ ಅಧಿಕೃತ ಸುತ್ತೋಲೆಯ ಮೂಲಕ ಈ ರೀತಿಯ ಘಟನೆಗಳು ಮರುಕಳಿಸದಂತೆ ಆದೇಶ ನೀಡಬೇಕಾಗಿ ಎಸ್‌ಡಿಪಿಐ ಆಗ್ರಹಿಸಿದೆ.
ಎಸ್‌ಡಿಪಿಐ ಮುಖಂಡರಾದ ಎ.ಎಂ.ಅಥಾವುಲ್ಲಾ, ಇಕ್ಬಾಲ್ ಬೆಳ್ಳಾರೆ ನಿಯೋಗದಲ್ಲಿದ್ದರು.







