ಡಿ.29ರಿಂದ ಪಣಂಬೂರಿನಲ್ಲಿ ಬೀಚ್ ಉತ್ಸವ

ಮಂಗಳೂರು, ಡಿ.28: ದ.ಕ.ಜಿಲ್ಲಾ ಕರಾವಳಿ ಉತ್ಸವದ ಪ್ರಯುಕ್ತ ಪಣಂಬೂರಿನಲ್ಲಿ ಬೀಚ್ ಉತ್ಸವ ಡಿ.29ರಿಂದ 31ರ ವರೆಗೆ ನಡೆಯಲಿದೆ ಎಂದು ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ ಯತೀಶ್ ಬೈಕಂಪಾಡಿ ಮುಡಾ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿ.29ರಂದು ಬೆಳಗ್ಗೆ ಬೀಚ್ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟ, ಸಂಜೆ 4:30ಕ್ಕೆ ಬೀಚ್ ಉತ್ಸವ ಉದ್ಘಾಟನೆ ಮತ್ತು ಸಂಜೆ 5ಕ್ಕೆ ಆಹಾರ ಉತ್ಸವದ ಉದ್ಘಾಟನೆ ಹಾಗೂ ಸಂಜೆ 5:15ರಿಂದ ಡ್ಯಾನ್ಸ್ ಫೆಸ್ಟಿವಲ್ಸ್ ಮತ್ತು ತುಳು ಹಾಡು ಸ್ಪರ್ಧೆ ನಡೆಯಲಿದೆ.
ಡಿ.30ರಂದು ಬೆಳಗ್ಗೆ 9ಕ್ಕೆ ಬೀಚ್ ವಾಲಿಬಾಲ್ ಮತ್ತು ತ್ರೋ ಬಾಲ್ ಪಂದ್ಯಾಟ, ಸಂಜೆ 4ರಿಂದ ಸಮರ್ಥ್ ಶೆಣೈ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ, ಸಂಜೆ 5ರಿಂದ ಗಾಯನ ಸ್ಪರ್ಧೆ ನಡೆಯಲಿದೆ.
ಡಿ.31ರಂದು ಬೆಳಗ್ಗೆ 5 ಗಂಟೆಗೆ ಬೃಹತ್ ಯೋಗ ಕಾರ್ಯಕ್ರಮ, ಬೆಳಗ್ಗೆ 6:30ರಿಂದ ಸ್ವಾತಿ ರಾವ್ ಮತ್ತು ಬಳಗದಿಂದ ರಾಗ- ಉದಯ ರಾಗ ಕಾರ್ಯಕ್ರಮ, 9:30ರಿಂದ ಸ್ಟ್ಯಾಂಡ್ ಅಪ್ ಪೆಡಲಿಂಗ್, 10ಕ್ಕೆ ಸರ್ಫಿಂಗ್, 10ಕ್ಕೆ ಮರಳು ಶಿಲ್ಪ ಸ್ಪರ್ಧೆ, ಸಂಜೆ 4ಕ್ಕೆ ಸಂಗೀತ, ಸಂಜೆ 5ರಿಂದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಯಕ್ಷಗಾನ ಮೂರ್ತ, ಸಂಜೆ 5:30ರಿಂದ ಕರಾವಳಿ ಉತ್ಸವ ಸಮಾರೋಪ, ಪ್ರಶಸ್ತಿ ವಿತರಣೆ, ಸಂಜೆ 6:30ರಿಂದ ಅಶ್ವಿನ್ ಶರ್ಮ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ, ರಾತ್ರಿ 9ರಿಂದ ವಸುದೀಕ್ಷಿತ ಮತ್ತು ತಂಡದಿಂದ ಸ್ವರಾತ್ಮ ಹಾಗೂ ಮಧ್ಯರಾತ್ರಿ 12ಕ್ಕೆ ಹೊಸ ವರ್ಷಾಚರಣೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಬೀಚ್ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ್ ರಾವ್, ಸದಸ್ಯರಾದ ಪಣಂಬೂರು ಇನ್‌ಸ್ಪೆಕ್ಟರ್ ರಫೀಕ್, ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ ಉಪಸ್ಥಿತರಿದ್ದರು.
ರಾತ್ರಿ 8:30ರಿಂದ ಪ್ರವೇಶ ನಿರ್ಬಂಧ
ಬೀಚ್ ಉತ್ಸವ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿರುವ ವಾಹನಗಳು ಮಧ್ಯಾಹ್ನ 2:30ರ ಒಳಗೆ ಪ್ರವೇಶ ಮಾಡಬೇಕು. ರಾತ್ರಿ 8:30ರ ಬಳಿಕ ಆಗಮಿಸುವ ಸಾರ್ವಜನಿಕರಿಗೆ ಪ್ರವೇಶ ನೀಡಲಾಗುವುದಿಲ್ಲ. ಸಾರ್ವಜನಿಕರು ಇದನ್ನು ಗಮನಿಸಿ ಆಯೋಜಕರೊಂದಿಗೆ ಸಹಕರಿಸಬೇಕು. ಬೀಚ್ ಉತ್ಸವ ವೇದಿಕೆ ಸಮೀಪ ಪೊಲೀಸ್ ಔಟ್ ಪೋಸ್ಟ್ ತೆರೆಯಲಾಗಿದೆ. ಅಗತ್ಯವಿದ್ದಲ್ಲಿ ಅದರ ನೆರವನ್ನು ಪಡೆದುಕೊಳ್ಳಬಹುದು ಎಂದು ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.







