ಡಿ.30: ಉಡುಪಿಯಲ್ಲಿ ಆನಂದತೀರ್ಥ ಜ್ಞಾನಯಾತ್ರೆ
ಉಡುಪಿ, ಡಿ.28: ಆಚಾರ್ಯ ಮಧ್ವರು ಅದೃಶ್ಯರಾಗಿ 700 ವರ್ಷ ಪೂರ್ಣಗೊಂಡ ಸಂಸ್ಮರಣೆಯಲ್ಲಿ ಆಯೋಜಿಸಲಾಗಿರುವ ಆನಂದತೀರ್ಥ ಜ್ಞಾನಯಾತ್ರೆ ಡಿ.30ರ ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.
ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಉಡುಪಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ತುಶಿಮಾಮದ ಅಧ್ಯಕ್ಷ ಕೆ.ಅರವಿಂದ ಆಚಾರ್ಯ ಇಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮ ಈಗಾಗಲೇ ಮೈಸೂರು ಮತ್ತು ಬೆಂಗಳೂರುಗಳಲ್ಲಿ ನಡೆದಿದ್ದು, ಮುಂದೆ ಚೆನ್ನೈ, ಹೈದರಾಬಾದ್, ಕೇರಳ, ಮುಂಬಯಿ, ಹುಬ್ಬಳ್ಳಿ, ಮಂತ್ರಾಲಯ ಅಲ್ಲದೇ ಅಮೆರಿಕದಲ್ಲೂ ನಡೆಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.
ಡಿ. 30ರಂದು ಬೆಳಗ್ಗೆ 8:30ಕ್ಕೆ ಸಂಸ್ಕೃತ ಮಹಾಪಾಠ ಶಾಲೆಯಿಂದ ಮೆರವಣಿಗೆ ಮೂಲಕ ಮಧ್ವಾಚಾರ್ಯರ ಪ್ರತಿಮೆಯ ಮೆರವಣಿಗೆ ರಥಬೀದಿ ಮೂಲಕ ರಾಜಾಂಗಣಕ್ಕೆ ಬರಲಿದ್ದು, 10ಗಂಟೆಗೆ ಕಾರ್ಯಕ್ರಮವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಬಳಿಕ ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಸಂಜೆ 4ಕ್ಕೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಂದ ವಿಶೇಷ ಪ್ರವಚನ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಅಷ್ಟಮಠಗಳ ಯತಿಗಳು ಪಾಲ್ಗೊಳ್ಳುವರು ಎಂದವರು ನುಡಿದರು. ಸುದ್ದಿಗೋಷ್ಠಿಯಲ್ಲಿ ತುಶಿಮಾಮದ ಪ್ರದೀಪ್‌ಕುಮಾರ್ ಕಲ್ಕೂರ, ಯು.ವಾದಿರಾಜ ಆಚಾರ್ಯ, ಕೆ.ರವಿಪ್ರಕಾಶ್ ಭಟ್, ಭಾಸ್ಕರರಾವ್ ಕಿದಿಯೂರು ಉಪಸ್ಥಿತರಿದ್ದರು.







