ಹೆಬ್ರಿ ತಾಲೂಕು ಘೋಷಣೆ: ಗೊಂದಲಕ್ಕೆ ತೆರೆ; 16 ಗ್ರಾಮಗಳ ಘೋಷಣೆ
ಹೆಬ್ರಿ, ಡಿ.28: ಹೆಬ್ರಿ ಜನತೆಯ ಬಹುಕಾಲದ ಕನಸಾಗಿದ್ದ ಹೆಬ್ರಿ ತಾಲೂಕು ರಚನೆಯ ಅಧಿಕೃತ ಘೋಷಣೆ ಇದೀಗ ಆಗಿದೆ.ಹೆಬ್ರಿಯನ್ನು ಹೊಸ ತಾಲೂಕಾಗಿ ಘೋಷಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಉಡುಪಿ ಜಿಲ್ಲಾಧಿಕಾರಿ ಅವರಿಗೆ ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿುಬಂದಿದೆ.
ನೂತನ ಹೆಬ್ರಿ ತಾಲೂಕಿಗೆ ಒಟ್ಟು 16 ಗ್ರಾಮಗಳು ಸೇರ್ಪಡೆಗೊಂಡಿವೆ. ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳ ಹಿಡಿತವಿರುವ ಗ್ರಾಮಗಳನ್ನು ಹೆಬ್ರಿ ತಾಲೂಕಿಗೆ ಸೇರುವುದನ್ನು ತಪ್ಪಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಈಗ ಕುಂದಾಪುರ ತಾಲೂಕಿನ ಬೆಳ್ವೆ, ಅಲ್ಬಾಡಿ, ಶೇಡಿಮನೆ, ಮಡಾಮಕ್ಕಿ ಮತ್ತು ಕಾರ್ಕಳ ತಾಲೂಕಿನಲ್ಲಿರುವ ಬೇಳಂಜೆ, ಕುಚ್ಚೂರು, ಹೆಬ್ರಿ, ಚಾರ, ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು, ಅಂಡಾರು, ವರಂಗ, ಪಡುಕುಡೂರು ಗ್ರಾಮಗಳನ್ನು ಸೇರಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದಲ್ಲಿ ಹೊಸ ತಾಲೂಕುಗಳ ಘೋಷಣೆ ಮಾಡುವಾಗ 2018ರ ಜ.1ರಿಂದಲೇ ಹೊಸ ತಾಲೂಕುಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದ್ದು, ಇತ್ತೀಚೆಗೆ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಕೂಡ ಜ.1ರಿಂದಲೇ ಹೊಸ ತಾಲೂಕುಗಳ ಕಾರ್ಯ ಆರಂಭ ಮಾಡಲು ಆದೇಶ ನೀಡಿದ್ದರು.
ಎಂ.ಬಿ.ಪ್ರಕಾಶ್ ನೇತೃತ್ವದ ತಾಲೂಕು ಪುನ:ರಚನಾ ಆಯೋಗ ಹೆಬ್ರಿಯನ್ನು ಕೇಂದ್ರ ಸ್ಥಾನವನ್ನಾಗಿಸಿ ಹೆಬ್ರಿ ಸುತ್ತಲಿನ 20 ಗ್ರಾಪಂ ವ್ಯಾಪ್ತಿಯ 32 ಗ್ರಾಮಗಳನ್ನು ಸೇರಿಸಿಕೊಂಡು ಹೆಬ್ರಿ ಹೊಸ ತಾಲೂಕು ಮಾಡುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈಗ ಹೆಬ್ರಿ ತಾಲೂಕು ಘೋಷಣೆಯ ಬಳಿಕ ಕಾರ್ಕಳ ತಾಲೂಕಿನ ವರಂಗ ಗ್ರಾಪಂ ವ್ಯಾಪ್ತಿಯ ಅಂಡಾರು ಗ್ರಾಮಸ್ಥರು ತಮಗೆ ಹೆಬ್ರಿ ಬೇಡ ಕಾರ್ಕಳ ಬೇಕು ಎಂದು ತಕರಾರು ತೆಗಿದಿದ್ದಾರೆ. ಕಡ್ತಲವನ್ನು ಹೆಬ್ರಿಗೆ ಸೇರ್ಪಡೆ ಮಾಡಬಾರದು ಎಂದು ಆಕ್ಷೇಪಿಸಿ ಕಾರ್ಕಳ ಶಾಸಕರು ಮತ್ತು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಅದೇ ಪಂಚಾಯಿತಿಯ ಎಳ್ಳಾರೆ ಗ್ರಾಮ ಹೆಬ್ರಿಗೆ ಹತ್ತಿರವಿದೆ. ಆದರೆ ಹೊಸ ಅಧಿಸೂಚನೆಯಲ್ಲಿ ಎಳ್ಳಾರೆ ಕೂಡ ಹೆಬ್ರಿಯಿಂದ ಹೊರಗುಳಿದಿದೆ.
ಇನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಯಾವ ಗ್ರಾಮವೂ ಹೆಬ್ರಿ ತಾಲೂಕಿಗೆ ಸೇರಬಾರದೆಂದು ಶಾಸಕರು ವೌಖಿಕ ಸೂಚನೆ ನೀಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಉಡುಪಿ ತಾಲೂಕು ವ್ಯಾಪ್ತಿಯ ಗ್ರಾಮದವರು ಕೂಡ ಹೆಬ್ರಿಗೆ ಬರಲು ಆಸಕ್ತಿ ವಹಿಸಿಲ್ಲ ಎಂದು ತಿಳಿದುಬಂದಿದೆ.
ಕುಂದಾಪುರ ತಾಲೂಕಿನ ಹಾಲಾಡಿ ಮತ್ತು ಬಿಲ್ಲಾಡಿ ಗ್ರಾಮದವರು ತಮಗೆ ಹೆಬ್ರಿ ದೂರ ಎಂದು ಕುಂದಾಪುರ ತಾಲೂಕಿನಲ್ಲೇ ಉಳಿಯುವ ಇಚ್ಛೆ ವ್ಯಕ್ತಪಡಿಸಿ ದರೆ, ಬೆಳ್ವೆ ಗ್ರಾಪಂ ಹೆಬ್ರಿ ಸೇರ್ಪಡೆಗೆ ಸಮ್ಮತಿ ಸೂಚಿಸಿದೆ. ಅದೇ ರೀತಿ ಕಾಪು ಕ್ಷೇತ್ರದ ಬೈರಂಪಳ್ಳಿ ಮತ್ತು ಪೆರ್ಡೂರು ಗ್ರಾಮಸ್ಥರು ಹೆಬ್ರಿಗೆ ಸೇರಲು ಮನಸ್ಸು ಮಾಡಿದ್ದರೂ ಹೊಸ ಅಧಿಸೂಚನೆಯಲ್ಲಿ ಕಾಪುವಿನ ಯಾವುದೇ ಗ್ರಾಮದ ಹೆಸರಿಲ್ಲ.
ಇದೀಗ ಸರಕಾರ ತಾಲೂಕು ಘೋಷಣೆ ಮಾಡಿದ್ದು, ಗ್ರಾಮಗಳನ್ನು ಸೇರಿಸು ವುದು ಜಿಲ್ಲಾಧಿಕಾರಿಗಳ ಪರಮಾಧಿಕಾರ. 15ರಿಂದ 20ಕಿ.ಮಿಗಳ ಮಧ್ಯದ ಗ್ರಾಮಗಳನ್ನು ಚರ್ಚಿಸಿ ಸಾಧಕ-ಭಾದಕ ಅರಿತು ಸೇರಿಸುವಂತೆ ಸರಕಾರ ನಿರ್ದೇಶನ ನೀಡಿದೆ. ತಾಲೂಕು ಕಚೇರಿ ಆರಂಭಿಸಲು ಸದ್ಯಕ್ಕೆ ಹೆಬ್ರಿಯಲ್ಲಿ ಸುವ್ಯಸ್ಥಿತವಾಗಿರುವುದು ಆರೋಗ್ಯ ಇಲಾಖೆಗೆ ಸೇರಿದ ಹೆಬ್ರಿ ಬಸ್ ನಿಲ್ದಾಣದ ಪಕ್ಕದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಮಾತ್ರ. ಜಿಲ್ಲಾಧಿಕಾರಿ ತಮ್ಮ ಇಲಾಖೆಯ ಅಧಿಕಾರಿಗಳ ಮೂಲಕ ಇದೇ ಕಟ್ಟಡವನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಲಭ್ಯ ಕಚೇರಿಗಳು : ಮೆಸ್ಕಾಂ ಸಬ್ ಡಿವಿಜನ್, ಕೇಂದ್ರ ಸರಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕುಗಳು, ಪದವಿ ಪೂರ್ವ ಕಾಲೇಜು, ಪ್ರಥಮದರ್ಜೆ ಕಾಲೇಜು, ಜವಾಹರ್ ನವೋದಯ ವಿದ್ಯಾಲಯ, ಮೆಸ್ಕಾಂ ಸೆಕ್ಷನ್ ಕಛೇರಿ, ವಲಯ ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ, ಪೊಲೀಸ್ ಠಾಣೆ, ಖಜಾನೆ, ಪ್ರವಾಸಿ ಬಂಗಲೆ, ಸರ್ಕಾರಿ ಆಸ್ಪತ್ರೆ, ಪಶು ಆಸ್ಪತ್ರೆ ಸಹಿತ ಈಗಾಗಲೇ ಬಹುತೇಕ ವ್ಯವಸ್ಥೆಗಳು ಹೆಬ್ರಿಯಲ್ಲಿದೆ. ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ತಾಲ್ಲೂಕು ಮಟ್ಟದ ಕೃಷಿ, ತೋಟಗಾರಿಕೆ, ಶಿಕ್ಷಣ, ಕಾನೂನು, ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಹಿತ ಆಡಳಿತಕ್ಕೆ ಸಂಬಂಧಿಸಿದ ಇಲಾಖೆಗಳ ಕಚೇರಿಗಳನ್ನು ಆರಂಭಿಸುವುದಷ್ಟೆ ಬಾಕಿಯಿದೆ. ಹೆಬ್ರಿ ತಾಲೂಕು ಹೊಸತಾದರೂ ವಿಧಾನಸಭಾ ಕ್ಷೇತ್ರ ಅದೇ ಇರುತ್ತದೆ.
ಹೆಬ್ರಿ ಜನತೆ ಹೊಸ ವರ್ಷದ ಸ್ವಾಗತದೊಂದಿಗೆ ಹೊಸ ತಾಲೂಕನ್ನು ಸ್ವಾಗತಿಸುವ ಸಂಭ್ರಮದಲ್ಲಿದ್ದಾರೆ. ಒಟ್ಟಿನಲ್ಲಿ ಹೆಬ್ರಿ ಪರಿಸರದಲ್ಲಿ ಎಲ್ಲರಿಗೂ ಈಗ ಸಂಭ್ರವೊ ಸಂಭ್ರಮ.
ಭಂಡಾರಿ ಹೇಳಿಕೆ: ತಾಲೂಕು ರಚನಾ ಸಮಿತಿ 32 ಗ್ರಾಮಗಳನ್ನು ಸೇರಿಸಿ ಹೆಬ್ರಿ ತಾಲೂಕು ಮಾಡುವಂತೆ ಶಿಫಾರಸ್ಸು ಮಾಡಿದ್ದು ಅದರಂತೆ ವೀರಪ್ಪ ಮೊಯ್ಲಿ ಅವರ ಮುತುವರ್ಜಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಬ್ರಿಯನ್ನು ತಾಲೂಕು ಆಗಿ ಘೋಷಣೆ ಮಾಡಿದ್ದಾರೆ. ಹಲವರ ವ್ಯವಸ್ಥಿತ ಪ್ರಯತ್ನದ ಹೊರತಾಗಿಯೂ ಛಲ ಬಿಡದೆ ಮೊಯ್ಲಿ, ಮುಖ್ಯಮಂತ್ರಿಗಳು ಹೆಬ್ರಿಯನ್ನು ತಾಲೂಕಾಗಿ ಅಧಿಸೂಚನೆ ಹೊರಡಿಸುವಂತೆ ನೋಡಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದ್ಯಕ್ಕೆ ಆಕ್ಷೇಪವಿಲ್ಲದ 16 ಗ್ರಾಮಗಳನ್ನು ಸೇರಿಸಿ ಹೆಬ್ರಿ ತಾಲೂಕು ಮಾಡ ಲಾಗಿದೆ. ರಾಜ್ಯದಲ್ಲಿ ಎಲ್ಲಾ ತಾಲೂಕುಗಳು ಕಾರ್ಯಾರಂಭಿಸುವಾಗ ಹೆಬ್ರಿಯೂ ಆಗಲಿದೆ. ಇದಕ್ಕಾಗಿ ಸರಕಾರ, ವೀರಪ್ಪ ಮೊಯ್ಲಿ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಹೆಬ್ರಿ ತಾಲೂಕು ರಚನಾ ಹೋರಾಟ ಸಮಿತಿ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಗೋಪಾಲ ಭಂಡಾರಿ ತಿಳಿಸಿದರು.
ಸಮಿತಿಯ ಅಧ್ಯಕ್ಷ ಎಚ್.ಭಾಸ್ಕರ ಜೋಯಿಸ್, ಸಂಚಾಲಕ ನೀರೆ ಕೃಷ್ಣ ಶೆಟ್ಟಿ, ಪ್ರಮುಖರಾದ ಎಚ್.ಪ್ರವೀಣ್ ಬಲ್ಲಾಳ್, ನವೀನ ಕೆ. ಅಡ್ಯಂತಾಯ ಹಾಗೂ ಇತರರು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







