ಸಿನೆಮಾ ನಟನಿಂದ ಅತ್ಯಾಚಾರ: ಆರೋಪ
ಬೆಂಗಳೂರು, ಡಿ.28: ಹೊಂಬಣ್ಣ ಚಿತ್ರದ ಸಹನಟ ಸುಬ್ರಹ್ಮಣ್ಯ ಎಂಬುವರು ತಮ್ಮ ಮೇಲೆ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಿ ಯುವತಿಯೊಬ್ಬರು ನಗರದ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಶಿವಮೊಗ್ಗ ಮೂಲದ ಸುಬ್ರಹ್ಮಣ್ಯ, ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿ ಅತ್ಯಾಚಾರ ಎಸಗಿರುವುದಾಗಿ ಯುವತಿ ದೂರಿನಲ್ಲಿ ಆರೋಪಿಸಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಹ ನಟ ಸುಬ್ರಹ್ಮಣ್ಯ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ದೂರಿನಲ್ಲಿ ಏನಿದೆ: ಸಹನಟ ಸುಬ್ರಹ್ಮಣ್ಯ ನನಗೆ ಪರಿಚಯವಿದ್ದು, ನ.1ರಂದು ಅವರು, ಕಾರ್ಯಕ್ರವೊಂದಕ್ಕೆ ಬರುವಂತೆ ಒತ್ತಾಯಿಸಿದ್ದರು. ಅದನ್ನು ಒಪ್ಪಿ ಜತೆಗೆ ಹೋಗಿದ್ದೆ. ಆದರೆ, ಅಂದು ಅವರ ಕೊಠಡಿಗೆ ಕರೆದುಕೊಂಡು ಹೋಗಿ ಕುಡಿಯಲು ತಂಪು ಪಾನೀಯ ಕೊಟ್ಟಿದ್ದರು. ಅದನ್ನು ಕುಡಿದ ಬಳಿಕ ಪ್ರಜ್ಞೆ ತಪ್ಪಿತ್ತು.
ಅರ್ಧ ಗಂಟೆಯ ಬಳಿಕ ಎಚ್ಚರವಾಗಿತ್ತು. ಅದೇ ವೇಳೆ ನನ್ನ ಮೈ ಮೇಲೆ ಬಟ್ಟೆ ಇರಲಿಲ್ಲ. ಅವರು ಅದೇ ಸ್ಥಿತಿಯಲ್ಲಿದ್ದರು. ಪ್ರಜ್ಞೆ ತಪ್ಪಿದ್ದ ಅವಧಿಯಲ್ಲೇ ಅವರು ಅತ್ಯಾಚಾರ ಎಸಗಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ, ಹಲವು ದಿನಗಳಿಂದ ಮದುವೆಯಾಗದೆ ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿನಲ್ಲಿ ಯುವತಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಮದುವೆ ಆಗುವುದಕ್ಕೆ ಅವರು ನಿರಾಕರಿಸುತ್ತಲೇ ಇದ್ದರು. ಏಕೆ ಎಂದು ಪ್ರಶ್ನಿಸಿದಾಗ, 20 ಲಕ್ಷ ರೂ. ನೀಡಿ ಹೊಸ ಸಿನಿಮಾ ಮಾಡುವಂಥ ಹುಡುಗಿ ಬೇಕು. ನಿಮ್ಮದು ಬಡತನದ ಕುಟುಂಬ. ಜತೆಗೆ ಸಿನಿಮಾ ರಂಗದವರು ಬಂದರೆ ಅವರ ಜತೆ ಸಹಕರಿಸಬೇಕಾಗುತ್ತದೆ. ಅದು ನಿನ್ನಿಂದ ಸಾಧ್ಯವಿಲ್ಲ ಎಂದಿದ್ದರು. ಅದನ್ನು ನಿರಾಕರಿಸಿದ್ದಕ್ಕಾಗಿ ನನ್ನ ತೇಜೋವಧೆ ಮಾಡಲು ಆರಂಭಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ.







