ಯಡಿಯೂರಪ್ಪ ನಿವಾಸದ ಮುಂದೆ ವಿಐಎಸ್‍ಎಲ್ ಕಾರ್ಮಿಕರ ಪ್ರತಿಭಟನೆ

ಶಿವಮೊಗ್ಗ, ಡಿ. 28: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿ.ಐ.ಎಸ್.ಎಲ್.) ಯನ್ನು ಖಾಸಗೀಕರಣದಿಂದ ಕೈಬಿಡುವಂತೆ ಪ್ರಧಾನಮಂತ್ರಿಗಳ ಗಮನ ಸೆಳೆಯಬೇಕೆಂದು ಒತ್ತಾಯಿಸಿ ಕಾರ್ಖಾನೆಯ ಕಾರ್ಮಿಕರು ಭದ್ರಾವತಿ ಪಟ್ಟಣದಿಂದ ಶಿವಮೊಗ್ಗದ ವಿನೋಬ ನಗರದಲ್ಲಿರುವ ಬಿ.ಎಸ್. ಯಡಿಯೂರಪ್ಪ ನಿವಾಸದವರೆಗೆ ಜಾಥಾ ನಡೆಸಿದರು.
ಮಧ್ಯಾಹ್ನ ಭದ್ರಾವತಿ ಪಟ್ಟಣದ ವಿಐಎಸ್‍ಎಲ್ ಕಾರ್ಖಾನೆ ಮುಂಭಾಗದಿಂದ ಜಾಥಾಕ್ಕೆ ಚಾಲನೆ ನೀಡಲಾಯಿತು. ಬಸ್, ಬೈಕ್, ಕಾರು ಮತ್ತಿತರ ವಾಹನಗಳಲ್ಲಿ ಕಾರ್ಮಿಕರು ಆಗಮಿಸಿದರು. ಸಂಜೆ ಶಿವಮೊಗ್ಗ ನಗರಕ್ಕೆ ಆಗಮಿಸಿದ ಕಾರ್ಮಿಕರು, ಯಡಿಯೂರಪ್ಪ ನಿವಾಸದ ಮುಂಭಾಗ ಠಿಕಾಣಿ ಹೂಡಿದ್ದಾರೆ.
ಕಾರ್ಖಾನೆಗೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪರವರು ಸ್ಪಷ್ಟ ನಿಲುವು ವ್ಯಕ್ತಪಡಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಮನೆಯ ಮುಂಭಾಗ ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಗುರುವಾರ ಸಂಜೆ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಬಿ.ಎಸ್.ಯಡಿಯೂರಪ್ಪರವರು ಭಾಗವಹಿಸಿದ್ದಾರೆ. ಕಾರ್ಮಿಕರನ್ನು ಭೇಟಿಯಾಗಿ ಮಾತನಾಡುವ ಸಾಧ್ಯತೆ ಹೆಚ್ಚಿದೆ.
ವಿರೋಧ: ನಷ್ಟದಲ್ಲಿರುವ ವಿಐಎಸ್‍ಎಲ್ ಕಾರ್ಖಾನೆ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸಿದೆ. ಇದಕ್ಕೆ ಕಾರ್ಮಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾರ್ಖಾನೆ ಖಾಸಗೀಕರಣಗೊಳಿಸಬಾರದು. ಅದನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಮುಂದುವರಿಸಬೇಕು. ಕಾರ್ಖಾನೆಯ ಶ್ರೇಯೋಭಿವೃದ್ದಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸಿ ಕೊಡಬೇಕು. ಕಾರ್ಖಾನೆ ಖಾಸಗೀಕರಣಗೊಳಿಸದಂತೆ ಪ್ರಧಾನಮಂತ್ರಿಯವರ ಮೂಲಕವೇ ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು. ಅಲ್ಲಿಯವರೆಗೂ ಮನೆಯ ಮುಂಭಾಗ ನಡೆಸುತ್ತಿರುವ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.







