ಆಟೊ ನಿಲ್ದಾಣಗಳಲ್ಲಿ ಪ್ರಯಾಣ ದರ ಫಲಕ ಅಳವಡಿಕೆಗೆ ಕ್ರಮ: ಡಿಸಿ
ಕಾರವಾರ, ಡಿ.28: ಪ್ರಯಾಣಿಕರ ಸ್ನೇಹಿ ಆಟೊ ಸೇವೆಯನ್ನು ಒದಗಿಸಲು ಗೋಕರ್ಣ, ಮುರ್ಡೇಶ್ವರದಂತಹ ಪ್ರವಾಸಿ ಸ್ಥಳಗಳಲ್ಲಿರುವ ಆಟೊ ನಿಲ್ದಾಣಗಳಲ್ಲಿ ಪ್ರಯಾಣ ದರಗಳ ಫಲಕವನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್‌ಎಸ್. ನಕುಲ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಗೋಕರ್ಣ ಸೇರಿದಂತೆ ಕೆಲವು ಕಡೆಗಳಲ್ಲಿ ಕೆಲವು ರಿಕ್ಷಾ ಚಾಲಕರು ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಆಟೊಗಳಿಗೆ ಮೀಟರ್ ಅಳವಡಿಕೆ ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಮತ್ತು ಆರ್‌ಟಿಒದವರು ಒಂದು ಸಾಮಾನ್ಯ ದರಪಟ್ಟಿ ಸಿದ್ಧಪಡಿಸಿ ಆಟೊ ನಿಲ್ದಾಣಗಳಲ್ಲಿ ದರಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಆಟೊರಿಕ್ಷಾ ಕನಿಷ್ಠ ದರ 25: ಎಲ್ಲಾ ನಗರ ಪ್ರದೇಶ ಮತ್ತು ಗೋಕರ್ಣದಲ್ಲಿನ ಆಟೊರಿಕ್ಷಾಗಳ ಕನಿಷ್ಠ ದರವನ್ನು 25 ರೂ.ಗೆ ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾನೂನು ರೀತಿ ವ್ಯಾಪಾರ ಮಾಡಲು ಅವಕಾಶವಿದೆ: ಜಿಲ್ಲೆಯ ಗೋಕರ್ಣದಲ್ಲಿ ಬಾಡಿಗೆ ಮೋಟಾರ್‌ಸೈಕಲ್‌ಗೆ ಅನುಮತಿ ನೀಡಬಾರದು ಎಂದು ಜಿಲ್ಲಾ ಆಟೊ-ಚಾಲಕರ ಮಾಲಕರ ಸಂಘದವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿ, ದೇಶದ ಪ್ರತಿಯೊಬ್ಬ ನಾಗರಿಕನಿಗೆ ಕಾನೂನು ರೀತಿ ವ್ಯಾಪಾರ ಮಾಡಲು ಅವಕಾಶವಿದೆ. ಇಲ್ಲಿ ಬಾಡಿಗೆ ಆಟೊ ಅಥವಾ ಮೋಟಾರ್‌ಸೈಕಲ್ ಅನ್ನುವುದು ಮುಖ್ಯವಲ್ಲ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಮುಖ್ಯವಾಗಿದೆ ಎಂದು ಹೇಳಿದರು.
ವೈಟ್ ಬೋರ್ಡ್‌ಗೆ ಅನುಮತಿ: ಇ-ರಿಕ್ಷಾ ಮತ್ತು ಇ-ಕಾರ್ಟ್ 4+1 ಮಾದರಿಯ ಸಾರಿಗೆ ವರ್ಗದ ವಾಹನಗಳಿಗೆ ವೈಟ್ ಬೋರ್ಡ್ ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು. ವಿವಿಧ ಇಲಾಖಾ ಅಧಿಕಾರಿಗಳು ಆರ್‌ಟಿಒ ಅಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







