ದಾವಣಗೆರೆ: ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಿದ್ಧತೆ

ದಾವಣಗೆರೆ ,ಡಿ.28: ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ದೇವನಗರಿಯಲ್ಲೂ ದಿನಗಣನೆ ಆರಂಭವಾಗಿದೆ.
ಗುರುವಾರ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ನಗರದ ಹೈಸ್ಕೂಲ್ ಮೈದಾನಕ್ಕೆ ಭೇಟಿ ನೀಡಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಹಿನ್ನೆಲೆಯಲ್ಲಿ ಸ್ಥಳ ಅಂತಿಮಗೊಳಿಸಿ ಕಟ್ಟಡ ಕಾಮಗಾರಿ ಸಂಬಂಧ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಅವರು ಮಾತನಾಡಿದರು.
ನಂತರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ರಾಜ್ಯ ಸರ್ಕಾರದ ಆದೇಶದ ಮೇರೆಗೆ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಕೆಇಎಫ್ ಎಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಮೊದಲ ಹಂತದಲ್ಲಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಶ್ರೀರಾಮ ನಗರ ಮತ್ತು ಹೈಸ್ಕೂಲ್ ಮೈದಾನದಲ್ಲಿ ಕ್ಯಾಂಟೀನ್ ಆರಂಭಿಸಲು ಕಟ್ಟಡದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಒಟ್ಟಾರೆ ಜಿಲ್ಲೆಯಲ್ಲಿ 13 ಇಂದಿರಾ ಕ್ಯಾಂಟೀನ್‍ಗಳನ್ನು ಆರಂಭಿಸಲು ಸರ್ಕಾರದ ಅನುಮತಿ ಸಿಕ್ಕಿದೆ. ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ನಗರದಲ್ಲಿ 8, ತಾಲೂಕುಗಳಲ್ಲಿ 5 ಕ್ಯಾಂಟೀನ್‍ಗಳನ್ನು ಹಂಚಿಕೆ ಮಾಡಲಾಗಿದೆ. ಈಗಾಗಲೇ ಇಂದಿರಾ ಕ್ಯಾಂಟೀನ್ ಆಹಾರ ತಯಾರಿಕೆ ಮತ್ತು ಹಂಚಿಕೆ ಬಗ್ಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ನಂತರ, ಕೆಇಎಫ್ ಎಜೆನ್ಸಿ ಎಂಜಿನಿಯರ್ ಮೋಹನ್ ಕುಮಾರ್ ಮಾತನಾಡಿ, ನಗರದ ಮೂರು ಕಡೆಗಳಲ್ಲಿ ರೆಡಿಮೇಡ್ ಕಾಂಕ್ರೇಟ್ ಬ್ರಿಗ್ಸ್ (ಸ್ಲಾಬ್) ನಿಂದ ಕಟ್ಟಡವನ್ನು ಕಟ್ಟಲಾಗುತ್ತಿದ್ದು, ಈಗಾಗಲೇ 3 ಭಾಗದಲ್ಲಿ ನೀರಿನ ವ್ಯವಸ್ಥೆಗೆ ತೊಟ್ಟಿಯನ್ನು ಸಹ ಕಟ್ಟಲಾಗಿದೆ. ಉಳಿದಂತೆ ಕಟ್ಟಡ ಕಟ್ಟುವುದಕ್ಕೆ ತಮಿಳುನಾಡಿನ ಕೃಷಗಿರಿಯಿಂದ ಸಾಮಾಗ್ರಿಗಳನ್ನು ತರಿಸಲಾಗಿದೆ. ವಿದ್ಯುತ್, ಟೈಲ್ಸ್ ಸೇರಿದಂತೆ ಎಲ್ಲಾ ರೀತಿಯ ಕೆಲಸವನ್ನು ಸುಮಾರು 15 ದಿನಗಳಲ್ಲಿ ಮುಗಿಸಲಾಗುವುದು ಎಂದು ತಿಳಿಸಿದರು.
ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಜೊತೆಗೆ ಅಡುಗೆ ಕೋಣೆಯನ್ನು ಸಹ ಅಲ್ಲಿಯೇ ಕಟ್ಟಲಾಗುವುದು. ಇನ್ನುಳಿದಂತೆ ಹೈಸ್ಕೂಲ್ ಮೈದಾನ ಮತ್ತು ಶ್ರೀರಾಮ್‍ನಗರದಲ್ಲಿ ಕ್ಯಾಂಟೀನ್ ಮಾಡಿ ಊಟ ಹಂಚಿಕೆ ಮಾಡಲಾಗುತ್ತದೆ ಎಂದರು.
ಈ ವೇಳೆ ಪಾಲಿಕೆ ಆಯುಕ್ತ ಎಚ್.ಬಿ. ನಾರಾಯಣಪ್ಪ ಸೇರಿದಂತೆ ಮತ್ತಿತರರು ಇದ್ದರು.





