ಸಚಿವ ಹೆಗಡೆ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲಿ: ದೇಶಪಾಂಡೆ

ಕಾರವಾರ, ಡಿ.28: ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ತಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಕೆಲ ಬಿಜೆಪಿ ನಾಯಕರೇ ಅವರು ಹೇಳಿಕೆಗಳಿಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಗುರುವಾರ ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸಚಿವರ ಹೇಳಿಕೆ ಜನರಿಗೆ ನೋವು ತಂದಿದೆ. ಈ ಬಗ್ಗೆ ಪ್ರಧಾನಮಂತ್ರಿ ಗಮನಕ್ಕೂ ಬಂದಿದೆ ಆದರೆ ಇನ್ನೂ ಕ್ರಮವಾಗಿಲ್ಲ. ಹೆಗಡೆಗೆ ಸಿಕ್ಕಿರುವ ಸೂಕ್ತ ರೀತಿಯಲ್ಲಿ ಬಳಿಕೆ ಮಾಡಿಕೊಳ್ಳಬೇಕು. ಕೌಶಲ್ಯಾಭಿವೃದ್ಧಿಯಂಥ ಪವಿತ್ರ ಕೆಲಸ ಮತ್ತೊಂದಿಲ್ಲ ಎಂದರು.
ಮಹಾದಾಯಿ ಕುಡಿಯುವ ನೀರಿನ ವಿಷಯದಲ್ಲಿ ಗೋವಾ ಸಿಎಂ ಮನೋಹರ್ ಪಾರಿಕ್ಕರ್ ರಾಜ್ಯದ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯಬೇಕಿತ್ತು. ಅದರ ಬದಲಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಪತ್ರ ಬರೆದಿದ್ದು ಸಮಂಜಸವಲ್ಲ. ಮಹಾದಾಯಿ ನೀರಿನ ವಿಷಯ ಎರಡು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಹೀಗಿರುವಾಗ ಗೋವಾ ಸಿಎಂ ಮನೋಹರ ಪಾರಿಕ್ಕರ್, ಪಕ್ಷದ ಮುಖಂಡರಿಗೆ ಈ ವಿಷಯವಾಗಿ ಪತ್ರ ಬರೆದು ತಪ್ಪು ಾಡಿದ್ದಾರೆ ಎಂದರು.
ಕುಡಿಯು ನೀರಿನ ಸಮಸ್ಯೆ ಪಕ್ಷದ ಸಮಸ್ಯೆಯಾ ಅಥವಾ ಎರಡು ರಾಜ್ಯಗಳ ಸಾಮರಸ್ಯದ ಸಮಸ್ಯೆಯಾ ಎಂದು ಜನಪ್ರತಿನಿಧಿಯಾದವರಿಗೆ ಅರಿವಿರಬೇಕು. ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಗೋವಾ ಸಿಎಂ ಪ್ರಧಾನಿಗೆ ಪತ್ರ ಬರೆದಿರುವುದು ಸರಿಯಾಗಿದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಪತ್ರ ಬರೆಯುವ ಅಗತ್ಯ ಇರಲಿಲ್ಲ. ಬಿ.ಎಸ್. ಯಡಿಯೂರಪ್ಪಗೋವಾ ಸರಕಾರ ತಮ್ಮ ಕೈಯಲ್ಲಿದೆ. ಮಹಾದಾಯಿ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮಾತು ಕೊಟ್ಟು ವಚನಭ್ರಷ್ಟರಾದರು ಎಂದರು.
ಚುನಾವಣೆ ಹತ್ತಿರ ಬಂದಾಗ ಬಿಜೆಪಿಯವರಿಗೆ ನೀರಿನ ಸಮಸ್ಯೆ ಅರಿವಾಗುತ್ತದೆ ಎಂದು ಟೀಕಿಸಿದರು. ನಾನು ಹಿಂದು ಬ್ರಾಹ್ಮಣ. ಇದನ್ನು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ರಘುನಾಥ ಎನ್ನುವ ನನ್ನ ಹೆಸರು ರಾಮನ ಅವತಾರ. ಈ ಕಾರಣಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಬಿಜೆಪಿಯವರು ಮೊದಲು ನನ್ನ ಆಶೀರ್ವಾದ ಪಡೆಯಬೇಕು. ಯಾರೇ ಆದರೂ ತಮ್ಮ ಧರ್ಮದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವಂಥ ವಾತಾವರಣ ಸೃಷ್ಟಿಸಿಕೊಳ್ಳಬೇಕು. ಎಲ್ಲ ಧರ್ಮದಲ್ಲಿಯು ಒಳ್ಳೆಯವರು, ಕೆಟ್ಟವರು ಇದ್ದಾರೆ. ಬಿಜೆಪಿಗರಿಗಿಂತ ಹೆಚ್ಚು ದೇವಸ್ಥಾನಕ್ಕೆ ಹೋಗುತ್ತೇನೆ. ಚರ್ಚ್, ದರ್ಗಾಗಳಿಗೆ ಹೋಗುತ್ತೇನೆ ಎಂದ ಅವರು, ಜಾತಿಯ ವಿಷ ಬೀಜ ಬಿತ್ತಿ ಗಲಭೆ ಮಾಡುವುದು ಸರಿಯಲ್ಲ. ಜಿಲ್ಲೆಯಲ್ಲಿ ಗಲಭೆ ನಡೆಸಿ ಅಹಿತಕರ ವಾತಾವರಣ ಸೃಷ್ಟಿಸಿರುುದು ಸರಿಯಲ್ಲ ಎಂದು ಹೇಳಿದರು.
ಪರೇಶ್ ಮೇಸ್ತಾ ಕುಟುಂಬಕ್ಕೆ ನಾನು ವೈಯಕ್ತಿವಾಗಿ ನೀಡಿದ ಪರಿಹಾರ ತಿರಸ್ಕರಿಸಿದಕ್ಕೆ ಬೇಸರವಿಲ್ಲ. ಸರಕಾರದ ವತಿಯಿಂದ 2ಲಕ್ಷ ರೂ. ಪರಿಹಾರ ನೀಡಲು ಸೂಚನೆ ನೀಡಿದ್ದೇನೆ. ಜೊತೆಗೆ ಮೃತ ಪರೇಶ ಸಹೋದರಿಗೆ ಕೆಡಿಸಿಸಿ ಬ್ಯಾಂಕಿನಲ್ಲಿ ಉದ್ಯೋಗ ನೀಡಲು ಮುಂದಾಗಿದ್ದರೂ ಅವರು ಕುಟುಂಬ ಸದಸ್ಯರು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.







