ಆಧಾರ್ ಮಾಹಿತಿಗೆ ಹೊಂದಿಕೆಯಾಗದ ಬೆರಳಚ್ಚು ಗುರುತು : ಮಿಲಿಯಾಂತರ ಮಂದಿಗೆ ಪೆನ್ಷನ್ ನಿರಾಕರಣೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಡಿ.29: ಆಧಾರ್ ಮಾಹಿತಿಯಲ್ಲಿ ನೀಡಲಾಗಿರುವ ಬೆರಳಚ್ಚಿನ ಗುರುತು ಮತ್ತು ಈಗಿನ ಬೆರಳಚ್ಚಿನ ಗುರುತಿಗೆ ವ್ಯತ್ಯಾಸವಿರುವ ಕಾರಣ ಮಿಲಿಯಾಂತರ ಮಂದಿ ಪೆನ್ಷನ್ ಹಣವನ್ನು ಪಡೆಯಲಾಗುತ್ತಿಲ್ಲ ಎಂದು ಬಿಜೆಪಿ ಸಂಸದ ಸುಶೀಲ್ ಕುಮಾರ್ ಸಿಂಗ್ ಲೋಕಸಭೆಯಲ್ಲಿ ಹೇಳಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಸಿಂಗ್, ವೃದ್ಧಾಪ್ಯದ ಕಾರಣ ಬೆರಳಚ್ಚಿನಲ್ಲಿ ವ್ಯತ್ಯಾಸವಾಗಿದ್ದು ಇದರಿಂದ ವೃದ್ಧರಿಗೆ ಹಾಗೂ ವಿಶೇಷ ಸಾಮರ್ಥ್ಯದ ಜನತೆಗೆ ತೀವ್ರ ತೊಂದರೆಯಾಗಿದೆ. ವಯಸ್ಸಾಗುತ್ತಾ ಬಂದಂತೆ ಕಣ್ಣಿನ ಪಾಪೆ ಕೂಡಾ ವಿರೂಪಗೊಳ್ಳುತ್ತಾ ಸಾಗುತ್ತದೆ. ಈ ವಿಷಯದ ಬಗ್ಗೆ ಶೀಘ್ರ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು. ಹಿರಿಯ ಮಹಿಳೆಯೊಬ್ಬರ ಬೆರಳಚ್ಚಿನ ಗುರುತು ತಾಳೆಯಾಗುವುದಿಲ್ಲ ಎಂಬ ಕಾರಣಕ್ಕೆ ಅವರಿಗೆ ಮೊಬೈಲ್ ಸಿಮ್ಕಾರ್ಡ್ ನೀಡಲಾಗಿಲ್ಲ. ಕೊನೆಗೆ ಮತ್ತೊಬ್ಬರ ಹೆಸರಿನಲ್ಲಿ ಸಿಮ್ಕಾರ್ಡ್ ಪಡೆಯಬೇಕಾಯಿತು ಎಂದು ಸಿಂಗ್ ಹೇಳಿದರು.
ತಮ್ಮ ಚಂದಾದಾರರಿಗೆ ದೊರೆಯಬೇಕಿದ್ದ ಸಬ್ಸಿಡಿ ಸೌಲಭ್ಯವನ್ನು ತಾವೇ ಪಡೆದು ವಂಚಿಸಿದ ಟೆಲಿಕಾಂ ನಿರ್ವಾಹಕರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಬಿಜೆಡಿ ಸಂಸದ ತಥಾಗತ ಸತ್ಪತಿ ಈ ಬೇಡಿಕೆಗೆ ಧ್ವನಿಗೂಡಿಸಿದರು.





