ಮೂಡಿಗೆರೆ : ಅನಂತ್ ಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆಗೆ ಖಂಡನೆ
ಮೂಡಿಗೆರೆ, ಡಿ.29: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕೇಂದ್ರ ಸಚಿವರಾಗಿ ಆಯ್ಕೆಯಾದ ಸಮಯದಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ಈಗ ಸಂವಿಧಾನದ ವಿರುದ್ಧ ದೇಶ ವಿರೋಧಿ ಹೇಳಿಕೆ ನೀಡಿರುವುದನ್ನು ಪರಿಶಿಷ್ಟ ಜಾತಿ ಮತ್ತು ಪಂಗಡ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಕೆ.ಕೆ.ರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಅವರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿ, ಸಂವಿಧಾನದ ಮೇಲೆ ನಿಷ್ಠೆ, ಗೌರವ ಹೊಂದಿರುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆ ಅವರು, ಅದೇ ಸಂವಿಧಾನವನ್ನು ಬದಲಾಯಿಸುವುದಕ್ಕೆ ನಾನು ಅಧಿಕಾರಕ್ಕೆ ಬಂದಿರುವುದೆಂದು ಹೇಳಿರುವುದು, ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಇದಲ್ಲದೇ ಜಾತ್ಯಾತೀತರಿಗೆ ಅಪ್ಪ ಅಮ್ಮ ಯಾರೆಂಬುದೇ ಗೊತ್ತಿಲ್ಲವೆಂಬ ಹೇಳಿಕೆ ಕೂಡ ಸಂವಿಧಾನ ವಿರೋಧಿ ಹೇಳಿಕೆಯಾಗಿದ್ದು, ದೇಶಕ್ಕೆ ಮಾಡಿದ ಅವಮಾನವಾಗಿದೆ. ಆದ್ದರಿಂದ ಬಹುಸಂಖ್ಯಾತರ ಭಾವನಗೆ ಹಾಗೂ ಭಾರತದ ಭವ್ಯ ಜಾತ್ಯಾತೀತ ಪರಂಪರೆಗೆ ಧಕ್ಕೆ ತಂದಿರುವ ಸಚಿವ ಅನಂತಕುಮಾರ ಹೆಗಡೆ ಅವರನ್ನು ದೇಶದ್ರೋಹದಡಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಯಾವುದೇ ಕಾರಣಕ್ಕೂ ಜಿಲ್ಲೆಗೆ ಪ್ರವೇಶ ಮಾಡದಂತೆ ನಿರ್ಬಂಧಿಸಬೇಕು. ಇಲ್ಲವಾದರೆ ಸ್ಥಳದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ವಿಜಯಪುರದ ಮೃತ ದಾನಮ್ಮಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಬಗ್ಗೆ ಇತ್ತೀಚೆಗೆ ಮೂಡಿಗೆರೆ ಪಟ್ಟಣದಲ್ಲಿ ಬಂದ್‍ಗೊಳಿಸಲಾಗಿತ್ತು. ಬಂದ್ ಕರೆಯಲ್ಲಿ ಭಾಗವಹಿಸಿ ಸಹಕರಿಸಿದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ವರ್ತಕರು ಹಾಗೂ ಎಲ್ಲಾ ಪ್ರಗತಿಪರ ಸಂಘಟನೆ ಮುಖಂಡರುಗಳಿಗೆ ಒಕ್ಕೂಟದಿಂದ ಕೃತಜ್ಞತೆ ತಿಳಿಸಿರುವ ಅವರು, ಬಂದ್‍ಗೊಳಿಸಿದ ದಿನ ಕ್ರಿಸ್‍ಮಸ್ ಹಬ್ಬ ಆಚರಣೆಗೆ ತೊಂದರೆಯಾಗಿದ್ದಲ್ಲಿ ಸಮಿತಿ ವಿಷಾಧ ವ್ಯಕ್ತಪಡಿಸುತ್ತದೆ. ಹಬ್ಬದ ಆಚರಣೆಗೆ ಅಡ್ಡಿ ಮಾಡುವ ಯಾವುದೇ ವ್ಯಯುಕ್ತಿಕ ಉದ್ದೇಶ ಸಮಿತಿಗೆ ಇರಲಿಲ್ಲ. ಇದರಿಂದ ಕ್ರಿಶ್ಚಿಯನ್ ಬಾಂಧವರಿಗೆ ನೋವಾಗಿದ್ದರೆ ಹಿತರಕ್ಷಣ ಸಮಿತಿ ಕ್ಷಮೆಯಾಚಿಸುತ್ತದೆ ಎಂದು ತಿಳಿಸಿದ್ದಾರೆ.







