ಜನಾರ್ದನ ಪೂಜಾರಿ ಕುರಿತು ಅಪಾರವಾದ ಗೌರವವಿದೆ: ಸಚಿವ ರೈ

ಬಂಟ್ವಾಳ, ಡಿ. 29: ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರ ಕುರಿತು ನನಗೆ ಅಪಾರವಾದ ಗೌರವವಿದೆ. ಅವರ ಕುರಿತು ನಾನು ಏನೂ ಮಾತನಾಡಿಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಶುಕ್ರವಾರ ಬಿ.ಸಿ.ರೋಡಿನ ತನ್ನ ಕಚೇರಿ ಬಳಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ಸಮಾರಂಭವೊಂದರಲ್ಲಿ ತಾನು ಪೂಜಾರಿಯವರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿದ್ದೆ. ಅವರು ನನ್ನಲ್ಲಿ ಮಾತನಾಡಿದ್ದರು. ತಾನು ಪೂಜಾರಿ ಅವರ ಮೇಲೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ. ಹಿರಿಯರಾದ ಅವರ ವಿರುದ್ಧ ನಾನು ಏನೂ ಮಾತನಾಡಲಿಲ್ಲ. ಆದರೆ ಅವರನ್ನು ದಾರಿ ತಪ್ಪಿಸುವವರಿದ್ದಾರೆ ಎಂದು ರೈ ಹೇಳಿದರು.
ಗಂಟೆಗೊಂದು ಪಕ್ಷ ಸೇರುವ ಜಾತಿಗೆ ತಾನು ಸೇರಿಲ್ಲ. ಯಾರಿಗೆ ಸೀಟು ಬೇಕು, ಬೇಡ ಎಂಬ ತೀರ್ಮಾನವನ್ನು ನಾನು ಮಾಡಿಲ್ಲ. ಅವರು ತಪ್ಪಾಗಿ ಅರ್ಥಮಾಡಿಕೊಂಡಿದ್ದರೆ ದೇವರು ನೋಡಿಕೊಳ್ಳಲಿ ಎಂದು ಹೇಳಿದ ರೈ, ತಾನು ಪೂಜಾರಿಯವರನ್ನು ಬೈದ ವೀಡಿಯೊ ಎಲ್ಲಾದರೂ ಬಂದಿದಾ ? ಎಂದು ಪ್ರಶ್ನಿಸಿದ ಅವರು, ಇದು ಪೂಜಾರಿ ಮತ್ತು ತನ್ನ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸಲು ಮಾಡಿದ ವಿಚಾರ ಎಂದರು.





