ಬಿಜೆಪಿ, ಸಂಘಪರಿವಾರದಿಂದ ಕೋಮುಗಲಭೆಗೆ ಹುನ್ನಾರ: ಎಸ್‌ಡಿಪಿಐ ಆರೋಪ

ಮಂಗಳೂರು, ಡಿ. 29: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರದಿಂದ ದ.ಕ. ಜಿಲ್ಲೆಯಲ್ಲಿ ಕೋಮುಗಲಭೆಗೆ ಹುನ್ನಾರ ನಡೆಯುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಚಾರ್ಮಾಡಿಯಲ್ಲಿ ಮಹಿಳೆಯ ವಿಚಾರದಲ್ಲಿ ಅನೈತಿಕ ಪೊಲೀಸ್‌ಗಿರಿ, ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ನಗರದ ಸ್ಟೇಟ್‌ಬ್ಯಾಂಕ್ ಬಳಿ ನಡೆದ ಅನೈತಿಕ ಪೊಲೀಸ್‌ಗಿರಿ ಮೂಲಕ ಜನರಲ್ಲಿ ಆತಂಕ ವಾತಾವರಣವನ್ನು ಸೃಷ್ಟಿಸಿದೆ. ಇತ್ತೀಚೆಗೆ ಜಲೀಲ್ ಕರೋಪಾಡಿ ಕೊಲೆ ಆರೋಪಿ ಮೇಲಿನ ದಾಳಿ, ವೀರಕಂಭದಲ್ಲಿ ಮಸೀದಿಗೆ ಕಲ್ಲು ತೂರಾಟ ಪ್ರಕರಣಗಳು ನಡೆದಿವೆ. ಈ ಮೂಲಕ ಬಿಜೆಪಿ ಹಾಗೂ ಸಂಘಪರಿವಾರವು ಜಿಲ್ಲೆಯಲ್ಲಿ ಕೋಮು ಘರ್ಷಣೆಯನ್ನು ಹುಟ್ಟು ಹಾಕಿ ರಾಜಕೀಯ ಬೇಳೆ ಬೇಯಿಸಲು ಹವಣಿಸುತ್ತಿದೆ. ಇದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ‘ಕರಾವಳಿ ಹೊತ್ತಿ ಉರಿಯಲಿದೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಜಿಲ್ಲೆಯನ್ನು ಹೊತ್ತಿ ಉರಿಸಲು ಇದೇನು ಇವರ ಪಿತ್ರಾರ್ಜಿತ ಸೊತ್ತೇ ಎಂದು ಪ್ರಶ್ನಿಸಿರುವ ಹನೀಫ್ ಖಾನ್ ಕೊಡಾಜೆ, ಶೋಭಾ ಕರಂದ್ಲಾಜೆಯವರು ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಮಾತ್ರವಲ್ಲದೆ, ಹೊನ್ನಾವರ ಘಟನೆಯ ಬಗ್ಗೆ ಸುಳ್ಳು ಸುದ್ದಿಯನ್ನು ಟ್ವಿಟರ್‌ನಲ್ಲಿ ಹಾಕಿ ಸಮಾಜದ ಅಶಾಂತಿಗೆ ಕಾರಣರಾದ ಇವರನ್ನು ತಕ್ಷಣ ಬಂಧಿಸಿ, ಇವರ ಹೇಳಿಕೆಯ ಹಿಂದಿರುವ ಅಜೆಂಡಾವನ್ನು ಬಯಲಿಗೆಳೆಯಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಸಂಸದ ಪ್ರತಾಪ್ ಸಿಂಹ ತನ್ನ ವೀಡಿಯೋದಲ್ಲಿ ಹೇಳಿಕೊಂಡಿರುವಂತೆ ‘‘ಉಗ್ರ ಪ್ರತಿಭಟನೆ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ’’. ಇವೆಲ್ಲ ಗಮನಿಸುವಾಗ ರಾಜ್ಯದಲ್ಲಿ ಪೂರ್ವ ಯೋಜಿತವಾಗಿ ಸಂಘಪರಿವಾರ ಮತ್ತು ಬಿಜೆರಿ ಕೋಮು ಗಲಭೆಯನ್ನು ನಿರೀಕ್ಷಿಸುತ್ತಿದೆ. ಮತ್ತು ಚುನಾವಣೆಯನ್ನು ಎದುರಿಸಲು ಇದೊಂದು ಪರ್ಯಾಯ ಮಾರ್ಗ ಮಾರ್ಗವೆಂದು ಬಲವಾಗಿ ನಂಬಿಕೊಂಡಿದೆ ಎಂದು ಅವರು ಆರೋಪಿಸಿದರು.
ಉಪಾಧ್ಯಕ್ಷ ಆನಂದ ಮಿತ್ತಬೈಲ್ ಮಾತನಾಡಿ, ದಲಿತರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ಅತಾವುಲ್ಲಾ, ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯ ಉಪಸ್ಥಿತರಿದ್ದರು.







