ಉಡುಪಿ- ಸೈಕಲ್ ರಿಕ್ಷಾದಲ್ಲಿ ಹಸಿರು ಅಭಿಯಾನ: ಜಿಲ್ಲಾಧಿಕಾರಿ ಚಾಲನೆ

ಉಡುಪಿ, ಡಿ. 29: ಸಾಸ್ತಾನ ಮಿತ್ರರು, ಕೋಟ ಗೀತಾನಂದ ಫೌಂಡೇಶನ್ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿ ರುವ ಸ್ವಚ್ಚ, ಸುಂದರ ಪರಿಸರಕ್ಕಾಗಿ ಶುದ್ದಗಾಳಿ, ನೀರಿನ ಉಳಿವಿಗಾಗಿ, ವಿನೂತನ ಪರಿಕಲ್ಪನೆಯ ಹಸಿರು ಅಭಿಯಾನಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಶುಕ್ರವಾರ ಉಡುಪಿ ಮಾರುತಿ ವಿಥಿಕಾದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ತ್ಯಾಜ್ಯ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆ ಇಂದು ಇಡೀ ರಾಜ್ಯದಲ್ಲಿ ಪ್ರಥಮ ಎನಿಸಿಕೊಂಡಿದೆ. ತ್ಯಾಜ್ಯ ಸಮಸ್ಯೆ ನಿವಾರಣೆ ಮಾಡಬೇಕಾದರೆ ಮೊದಲು ತ್ಯಾಜ್ಯ ಉತ್ಪತ್ತಿಯನ್ನು ಕಡಿಮೆ ಮಾಡ ಬೇಕಾಗಿದೆ. ಕಾನೂನು ಪ್ರಕಾರ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಬೀಡಿನಗುಡ್ಡೆಯಲ್ಲಿರುವ ನಿರಾಶ್ರಿತರ ಕೇಂದ್ರವನ್ನು ಎನ್‌ಜಿಓಗಳಿಗೆ ವಹಿಸಿ ಕೊಡುವ ಕುರಿತು ಜನವರಿ ತಿಂಗಳಲ್ಲಿ ನಗರಸಭೆ ಜೊತೆ ಮಾತುಕತೆ ನಡೆಸ ಲಾಗುವುದು. ಇಲ್ಲಿನ ಮಹಿಳೆಯರ ವಿಭಾಗವನ್ನು ಸ್ತ್ರೀಶಕ್ತ್ತಿ ಒಕ್ಕೂಟ ಮತ್ತು ಪುರುಷರ ವಿಭಾಗವನ್ನು ವಲಸೆ ಕಾರ್ಮಿಕರ ಸಂಘ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕರಪತ್ರ ಬಿಡುಗಡೆ ಗೊಳಿಸಿದರು. ಉಡುಪಿ ಅರಣ್ಯ ಅಧಿಕಾರಿ ದೇವರಾಜ ಪಾಣ ಗಿಡಗಳನ್ನು ವಿತರಿಸಿದರು. ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಉಪಸ್ಥಿತರಿ ದ್ದರು. ಸಾಸ್ತಾನ ಮಿತ್ರರು ಸಂಸ್ಥೆಯ ಹ.ರಾ.ವಿನಯಚಂದ್ರ ಸ್ವಾಗತಿಸಿದರು. ತಾರನಾಥ ಮೇಸ್ತ ವಂದಿಸಿದರು. ಜ್ಯೋತಿ ಸಮಂತ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿ ರವಿವಾರ ಅಭಿಯಾನ
ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ದೆಹಲಿಯಿಂದ ತರಿಸಿದ ಸೈಕಲ್ ರಿಕ್ಷಾವನ್ನು ತುಳಿದು ಕೊಂಡು ಪ್ರತಿ ರವಿವಾರ ಒಂದೊಂದು ಪ್ರದೇಶಕ್ಕೆ ಭೇಟಿ ನೀಡಿ ಮೂರು ಗಿಡಗಳನ್ನು ನೆಡುವುದು ಈ ಹಸಿರು ಅಭಿಯಾನದ ಉದ್ದೇಶವಾಗಿದೆ. ಸುಮಾರು ಒಂದೂವರೆ ವರ್ಷಗಳ ಈ ಅಭಿಯಾನವನ್ನು ಉಡುಪಿಯಿಂದ ಆರಂಭಿಸಿ, ಮಣಿಪಾಲ, ಕಾರ್ಕಳ ಮಾರ್ಗವಾಗಿ ಇಡೀ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಸಾಸ್ತಾನ ಮಿತ್ರರು ಸಂಸ್ಥೆಯ ವಿನಯಚಂದ್ರ ತಿಳಿಸಿದರು.







