ಮನುಸ್ಮೃತಿ ಬೀಜ ಬಿತ್ತುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ : ಚಂದ್ರಶೇಖರ ಪಾಟೀಲ್

ಬೆಂಗಳೂರು, ಡಿ.29: ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಂವಿಧಾನವನ್ನು ರಚಿಸಿದರೆ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯಂತವರು ಸಂವಿಧಾನವನ್ನು ವಿರೋಧಿಸಿ ಜನರನ್ನು ಮತ್ತೆ ಮಧ್ಯಯುಗಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್ ಕಿಡಿಕಾರಿದ್ದಾರೆ.
ಶುಕ್ರವಾರ ಕಲಾಗ್ರಾಮದ ಸುವರ್ಣ ಸಮುಚ್ಚಯದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಆಯೋಜಿಸಿದ್ದ ಕುವೆಂಪು ಸಾಹಿತ್ಯ ಸಂವಾದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಸ್ಮೃತಿಯನ್ನು ಆರಾಧಿಸುವ ಪೇಜಾವರ ಶ್ರೀಗಳು, ಸಚಿವ ಅನಂತಕುಮಾರ್ ಹೆಗಡೆಯಂತವರನ್ನು ಸಂವಾದಕ್ಕೆ ಕರೆದು ತಿದ್ದಲು ಸಾಧ್ಯವಿಲ್ಲ. ಅದರ ಬದಲಿಗೆ ನಮ್ಮ ತಲೆಯಲ್ಲಿ ತುಂಬಿಕೊಂಡಿರುವ ಜೇಡಿ ಮಣ್ಣನ್ನು ಸ್ವಚ್ಛಗೊಳಿಸಿಕೊಂಡು ಯುವ ಪೀಳಿಗೆಗೆ ಸಂವಿಧಾನವನ್ನು ಅರ್ಥ ಮಾಡಿಸಿ, ಮನುಸ್ಮೃತಿಯನ್ನು ದೂರವಿಡಬೇಕಾಗಿದೆ ಎಂದು ಹೇಳಿದರು.
ನಮಗೆ ಅರಿವಿನ ಪರಂಪರೆ ಬೇಕಾಗಿದ್ದು, ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಹಾಗೂ ಕುವೆಂಪು ಅವರ ಬರಹ ಹಾಗೂ ಚಿಂತನೆಗಳನ್ನು ಅಳವಡಿಸಿಕೊಂಡು ಸಮಾಜವನ್ನು ಕಟ್ಟಬೇಕಾಗಿದೆ. ಕುವೆಂಪು ಅವರ ಮಾತಿನಲ್ಲಿ ಹೇಳುವುದಾದರೆ ಪುರೋಹಿತಶಾಹಿಗಳನ್ನು ಮದ್ದು ಗುಂಡುಗಳಿಂದ ಹೊಡೆಯುವ ಬದಲು ನಮ್ಮ ತಲೆಗೆ ನಾವೆ ಗುಂಡು ಹೊಡೆದುಕೊಂಡು ನಮ್ಮ ತಲೆಯಲ್ಲಿರುವ ಕಸವನ್ನು ತೆಗೆದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಯೋಚನೆ ಮಾಡಬೇಕಾಗಿದೆ. ಹಾಗೂ ವಿಶ್ವ ಮಾನವ ಕುವೆಂಪು ಅವರ ಸಂದೇಶಗಳನ್ನು ಎಲ್ಲ ಕಡೆಗೂ ಸಾರಬೇಕಾಗಿದೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರಕಾರ ಕುವೆಂಪು ಅವರ ಜನ್ಮದಿನಾಚರಣೆಯನ್ನು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಪಿಯು ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕೆಂದು ಆದೇಶ ಹೊರಡಿಸಿದ್ದು, ಈ ವರ್ಷದಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಕುವೆಂಪು ಅವರು ನಾಡಗೀತೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂಬ ಪದವನ್ನು ಬಳಕೆ ಮಾಡಿದ್ದಾರೆ. ಕೋಮುವಾದಿಗಳು ಈ ಪದ ಬಳಕೆಯನ್ನು ಅರ್ಥ ಮಾಡಿಕೊಂಡರೆ ಈ ನೆಲದ ಇತಿಹಾಸ ಹಾಗೂ ಕನ್ನಡದ ಪ್ರಜ್ಞೆ ಮೂಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ, ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ, ಸಾಹಿತಿ ಎಚ್.ದಂಡಪ್ಪ, ಎಸ್.ಆರ್.ವಿಜಯಶಂಕರ್ ಉಪಸ್ಥಿತರಿದ್ದರು.
ನಾಡಗೀತೆ ಸಂಕ್ಷಿಪ್ತ ಸರಿಯಲ್ಲ
ಕುವೆಂಪು ಅವರು ಎಲ್ಲ ಕಾಲ ಘಟ್ಟಕ್ಕೂ ಸಲ್ಲುವವರಾಗಿದ್ದು, ಅವರೊಬ್ಬ ಮಹಾನ್ ವ್ಯಕ್ತಿತ್ವ, ಸಮರ್ಥ ಲೇಖಕ, ಕವಿ, ಕಾದಂಬರಿಕಾರ, ಸಾಂಸ್ಕೃತಿಕ ಮಹತ್ವದ ಚೇತನ. ನಾಡ ಗೀತೆಯನ್ನು ಸಂಕ್ಷಿಪ್ತಗೊಳಿಸುವುದಕ್ಕೆ ನಾನು ಒಪ್ಪುವುದಿಲ್ಲ. ಅದರ ಬದಲಿಗೆ ನಾಡ ಗೀತೆ ಹಾಡುವಾಗ ಕಾಲು ನೋವಾದವರು, ನಿಲ್ಲಲಿಕ್ಕೆ ಆಗದವರು ಕುಳಿತುಕೊಂಡೆ ನಾಡಗೀತೆಯನ್ನು ಹಾಡಬಹುದು ಹಾಗೂ ಗೀತೆಯನ್ನು ಆಲಿಸಬಹುದು.
- ಚಂದ್ರಶೇಖರ ಪಾಟೀಲ್, ಹಿರಿಯ ಸಾಹಿತಿ







