ರಕ್ತ ದಾನಿಗಳಲ್ಲಿ ಶೇ.20 ರಷ್ಟು ಹೃದಯಾಘಾತದ ಸಂಭವ ಕಡಿಮೆ ಇರುತ್ತದೆ: ಡಾ.ಮುರಳೀಧರ್
ಚಿಕ್ಕಮಗಳೂರು, ಡಿ.29: ರಕ್ತ ದಾನಿಗಳಲ್ಲಿ ಶೇ.20 ರಷ್ಟು ಹೃದಯಾಘಾತದ ಸಂಭವ ಕಡಿಮೆ ಇರುತ್ತದೆ ಎಂದು ಜಿಲ್ಲಾ ಆಸ್ಪತ್ರೆ ವೈದ್ಯ ಡಾ.ಮುರಳೀಧರ್ ತಿಳಿಸಿದರು.
ಅವರು ನಗರದ ರೋಟರಿ ಸಭಾಂಗಣದಲ್ಲಿ ಲಯನ್ಸ್, ಲಯನೆಸ್ ಸಂಸ್ಥೆ, ಜ್ಞಾನಜ್ಯೋತಿ ಟಿಎಂಎಸ್ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಆಸ್ಪತ್ರೆ, ಯುವರೆಡ್ ಕ್ರಾಸ್ ಘಟಕ ಇನ್ನಿತರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ರಕ್ತದಾನ ಮಾಡಬೇಕೆಂಬ ಮನೋಭಾವನೆ ಕಡಿಮೆಯಾಗುತ್ತಿದೆ. ರಕ್ತದಾನದಿಂದ ದೇಹದ ಮೇಲೆ ಅಡ್ಡ ಪರಿಣಾಮ ಆಗಬಹುದು ಎನ್ನುವ ಭಯ ಇದಕ್ಕೆ ಕಾರಣವಾಗಿದೆ. ಆದರೆ ಈ ರೀತಿಯ ಆತಂಕ ಪಡುವ ಅಗತ್ಯವಿಲ್ಲ. 18 ವರ್ಷ ಮೇಲ್ಪಟ್ಟವರು ರಕ್ತದಾನ ಮಾಡಬಹುದು. ಇದರಿಂದ ಸಾವಿನಂಚಿನಲ್ಲಿರುವ ಎಷ್ಟೋ ಜೀವಗಳಿಗೆ ಪುನರ್ಜನ್ಮ ನೀಡಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ, ಮೊಬೈಲ್ ಬಳಕೆ, ರಸ್ತೆ ಅಪಘಾತ ಇನ್ನಿತರ ಪ್ರಕರಣಗಳಲ್ಲಿ ಸಾವು ನೋವು ಹೆಚ್ಚುತ್ತಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳು ರಕ್ತ ಸ್ರಾವದಿಂದ ನರಳುತ್ತಿರುವವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು. ಆದರೆ ಮೊಬೈಲ್‍ನಲ್ಲಿ ಗಾಯಗೊಂಡವರ ಚತ್ರೀಕರಣ ಮಾಡುತ್ತ ನಿಲ್ಲುವುದು ಸರಿಯಲ್ಲ. ಈ ಪ್ರವೃತ್ತಿಯನ್ನು ಬಿಡಬೇಕು ಎಂದು ಸಲಹೆ ಮಾಡಿದರು.
ರಕ್ತಸ್ರಾವವನ್ನು ತಡೆಗಟ್ಟುವ ಹಿಮೋಸಿಲಿಯಾ ಔಷಧಿ ಈಗ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯವಿದೆ. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂದರು.
ಲಯನ್ಸ್ ಅಧ್ಯಕ್ಷೆ ಲೇಖಾ ಮಾತನಾಡಿ ಹೆರಿಗೆ ಸಂದರ್ಭದಲ್ಲಿ ರಕ್ತದ ಅಗತ್ಯ ಹೆಚ್ಚಿರುತ್ತದೆ. ಮಹಿಳೆಯರೂ ಸಹ ರಕ್ತದಾನ ಮಾಡಬಹುದು. ಇದರಿಂದ ಎರಡೂ ಜೀವಗಳನ್ನು ಉಳಿಸಲು ಸಾಧ್ಯವಿದೆ. ವಿದ್ಯಾರ್ಥಿನಿಯರು ಅಗತ್ಯ ಸಂದರ್ಭದಲ್ಲಿ ರಕ್ತದಾನಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿಎಂಸ್ ಕಾಲೇಜು ಪ್ರಾಂಶುಪಾಲ ಇಂದ್ರೇಶ್ ಮಾತನಾಡಿ ಸರ್ಕಾರ ಹಲವು ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸುತ್ತಿದೆ. ನಮ್ಮ ಕಾಲೇಜಿನಲ್ಲಿ ಪ್ರಥಮ ಬಾರಿ ನಡೆಯುತ್ತಿದೆ. ಸುಮಾರು 40 ರಿಂದ 50 ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಶಿಬಿರ ಯಶಸ್ವಿಯಾಗಿದೆ. ಇದೇ ರೀತಿ ಅಪಘಾತಗಳು ಸಂಭವಿಸಿದಾಗ ಹಾಗೂ ರೋಗಿಗಳಿಗೆ ತುರ್ತು ಅಗತ್ಯ ಇರುವಾಗ ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದು ಕರೆ ನೀಡಿದರು.
ಟಿಎಂಎಸ್ ಅಧ್ಯಕ್ಷೆ ನಳಿನಾ ಡಿ’ಸಾ, ಕಾರ್ಯದರ್ಶಿ ನೇತ್ರಾ ವೆಂಕಟೇಶ್, ಲಯನೆಸ್ ಅಧ್ಯಕ್ಷೆ ಪಿ.ಕೆ.ಗುಣರತ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸವಿತ ಆರ್.ಮೋಕ್ಷಾ, ಕೀರ್ತಿ ಶೇಟ್, ಅನುಸೂಯ ಜಗದೀಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಸ್ವಾಗತಿಸಿ, ವಂದಿಸಿದರು.







