ಮಡಿಕೇರಿ: ಗ್ರಾಹಕರ ಹಕ್ಕುಗಳು ಸದುಪಯೋಗವಾಗಬೇಕು; ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ

ಮಡಿಕೇರಿ, ಡಿ.29 :ಗ್ರಾಹಕರಿಗೆ ಆಯೋಗವು ಹಲವಾರು ಹಕ್ಕುಗಳನ್ನು ನೀಡಿದೆ. ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ-ಕುಶಾಲನಗರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಹಕರು ಉತ್ತಮ ಗುಣಮಟ್ಟದ ವಸ್ತುಗಳನ್ನು ಪಡೆಯಬೇಕು. ವಸ್ತುಗಳು ಕಲಬೆರಕೆಯಾದಾಗ ದೂರು ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಗ್ರಾಹಕರಿಗಾಗಿ ಗ್ರಾಹಕ ರಕ್ಷಣಾ ಆಯೋಗವಿದೆ. ಅದನ್ನು ಬಳಸಿಕೊಳ್ಳಿ ಎಂದು ಅವರು ತಿಳಿಸಿದರು.
ಗ್ರಾಹಕರಿಗೆ ನ್ಯಾಯ ಸಿಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾದ್ಯ. ಕಲಬೆರಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಹಾಗೆಯೇ ಜಾಹೀರಾತುಗಳನ್ನು ಸರಿಯಾಗಿ ತಿಳಿದುಕೊಳ್ಳದೆ ನಂಬಬಾರದು. ಗ್ರಾಹಕ ಆಯೋಗಗಳು ಜಿಲ್ಲಾ, ರಾಜ್ಯ, ರಾಷ್ಟ್ರದವರೆಗೂ ಇದೆ. ಇವುಗಳಿಂದ ನಾವು ಪರಿಹಾರ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಉಪ ವಿಭಾಗಧಿಕಾರಿ ಡಾ.ನಂಜುಂಡೇ ಗೌಡ ಅವರು ಮಾತನಾಡಿ ಗ್ರಾಹಕರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯ. ಭಾರತದ ಎಲ್ಲಾ ನಾಗರಿಕರು ವಸ್ತುಗಳನ್ನು ಖರೀದಿಸುವಾಗ ವಂಚನೆಗೆ ಒಳಗಾಗುತ್ತಾರೆ. ಇದು ತಪ್ಪಬೇಕಿದೆ ಎಂದು ತಿಳಿಸಿದರು.
ಗ್ರಾಹಕ ಆಯೋಗಕ್ಕೆ ಹೋಗುವ ಮುನ್ನ ಮಾಹಿತಿ ಬಹಳ ಮುಖ್ಯ. ಇದರಿಂದ ನೊಂದವರಿಗೆ ಪರಿಹಾರ ಕೊಡಿಸಲು ಉಪಯುಕ್ತವಾಗಿರುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಕೆ.ಡಿ.ಪಾರ್ವತಿ ಮಾತನಾಡಿ ಜನರಿಗೆ ಜಾಗೃತಿ ಮೂಡಿಸುವುದರಿಂದ ವಂಚನೆ ತಡೆಯಬಹುದು. ಹಾಗೆಯೇ ವಸ್ತುವನ್ನು ಖರೀದಿಸುವಾಗ ತೂಕ ಮತ್ತು ಅಳತೆಯಲ್ಲಿ ಮೋಸ ಹೋಗದಂತೆ ಎಚ್ಚರಿಕೆಯಿಂದ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯರಾದ ಎಂ.ಎಸ್.ಲತಾ ಮಾತನಾಡಿ ಗ್ರಾಹಕರಿಗೆ ಆಗುವ ಅನ್ಯಾಯವನ್ನು ನಾವು ನೋಡಿಕೊಂಡಿರಬಾರದು. ನಾವು ಈಗಾಗಲೇ ಸಾವಿರ ಕೇಸ್‍ಗಳಿಗೆ ಪರಿಹಾರ ಕೊಟ್ಟಿದ್ದೇವೆ ಗ್ರಾಹಕರ ವ್ಯಾಜ್ಯಗಳನ್ನು 90 ದಿನದಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಎ.ಎ.ಚಂಗಪ್ಪ ಮಾತನಾಡಿ ಶುದ್ಧ ವಸ್ತುಗಳಿಗೆ ಅನ್ಯ ವಸ್ತುಗಳನ್ನು ಸೇರಿಸುವುದು ನಡೆಯುತ್ತಿದೆ. ಹಾಲು, ದತ್ತೂರಿ ಬೀಜ, ಸಾಂಬರ ಪದಾರ್ಥಗಳು ಇತರೆ ವಸ್ತುಗಳು ಇಂದು ಮಿಶ್ರಣವಾಗಿವೆ. ಅವಧಿ ಮುಗಿದರು ಅಂಗಡಿಗಳಲ್ಲಿ ಆಹಾರದ ಪೊಟ್ಟಣವನ್ನು ಮಾರುತ್ತಾರೆ. ಜನರು ಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಗ್ರಾಹಕ ಇಲಾಖೆಯ ಸಿಬ್ಬಂದಿಗಳು ಮತ್ತು ಇತರರು ಹಾಜರಿದ್ದರು.







