ಜ.6ರಿಂದ ಉಡುಪಿ ರಂಗಭೂಮಿ ನಾಟಕೋತ್ಸವ
ಉಡುಪಿ, ಡಿ.29: ಉಡುಪಿ ರಂಗಭೂಮಿಯ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ದೊಂದಿಗೆ 38ನೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ, ರಂಗಭೂಮಿ ಪ್ರಶಸ್ತಿ ಪ್ರದಾನ ಮತ್ತು ನಾಟಕೋತ್ಸವವನ್ನು ಜ.6 ಮತ್ತು 7ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಜ.6ರಂದು ಸಂಜೆ 6:15ಕ್ಕೆ ಕಾರ್ಯಕ್ರಮವನ್ನು ಸಮಾಜ ಸೇವಕ ಯು.ವಿಶ್ವ ನಾಥ ಶೆಣೈ ಉದ್ಘಾಟಿಸಲಿದ್ದು, ಬಳಿಕ ರಂಗಭೂಮಿಯ ಈ ವರ್ಷದ ಹೊಸ ನಾಟಕ ‘ಐ.ಸಿ.ಯು. ನೋಡುವೆ ನಿನ್ನ’ ಪ್ರದರ್ಶನಗೊಳ್ಳಲಿದೆ. ಈ ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಮಂಗಳಮುಖಿ ಕಾಜಲ್ ರಂಗ ಪ್ರವೇಶ ಮಾಡಲಿರುವರು ಎಂದು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜ. 7ರಂದು ಸಂಜೆ 5:45ಕ್ಕೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದ್ದು ಇದೇ ಸಂದರ್ಭದಲ್ಲಿ ರಾಜ್ಯದ ಹಿರಿಯ ರಂಗಕರ್ಮಿ ಕೆ.ಅಕ್ಷರಗೆ ‘ರಂಗಕಲಾ ವಾರಿಧಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಸ್ಥೆಯ ಸ್ಮರಣ ಸಂಚಿಕೆ ಕಲಾಂಜಲಿ ಬಿಡುಗಗೊಳ್ಳಲಿದೆ. ನಂತರ ಸ್ಪರ್ಧೆಯ ಪ್ರಥಮ ಬಹುಮಾನಿತ ‘ಸಂದೇಹ ಸಾಮ್ರಾಜ್ಯ’ ನಾಟಕದ ಮರುಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ನಂದಕುಮಾರ್, ಪ್ರಧಾನ ಕಾರ್ಯ ದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಜತೆಕಾರ್ಯದರ್ಶಿಗಳಾದ ರವಿರಾಜ್ ಎಚ್.ಪಿ., ಭಾಸ್ಕರ್‌ರಾವ್ ಕಿದಿಯೂರು ಉಪಸ್ಥಿತರಿದ್ದರು.
ಡಿ. 31 ‘ಅಂಬಲಪಾಡಿ ನಾಟಕೋತ್ಸವ’
ಉಡುಪಿ ರಂಗಭೂಮಿ ವತಿಯಿಂದ ನೀನಾಸಂ ತಿರುಗಾಟದ ದಿ.ನಿ.ಬೀ. ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ‘ಅಂಬಲಪಾಡಿ ನಾಟಕೋತ್ಸವ’ವನ್ನು ಡಿ. 31 ಹಾಗೂ ಜ.1ರಂದು ಅಂಬಲಪಾಡಿ ದೇವಸ್ಥಾನದ ತೆರೆದ ರಂಗ ಮಂಟಪದಲ್ಲಿ ಆಯೋಜಿಸಲಾಗಿದೆ.
ಸಂಜೆ 6:30ಕ್ಕೆ ನಾಟಕೋತ್ಸವವನ್ನು ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಉದ್ಘಾಟಿಸಲಿರುವರು. ಬಳಿಕ ನೀನಾಸಂ ತಿರುಗಾಟದ ನಾಟಕಗಳಾದ ‘ಮಧ್ಯಮ ವ್ಯಾಯೋಗ’ ಮತ್ತು ಜ.1ರಂದು ಸಂಜೆ 6:30ಕ್ಕೆ ‘ಸು ಬಿಟ್ರೆ ಬಣ್ಣ ಬಾ ಬಿಟ್ರೆ ಸುಣ್ಣ’ ಪ್ರದರ್ಶನಗೊಳ್ಳಲಿದೆ.







