ಕುಂದಾಪುರದಲ್ಲಿ ಗೋರಕ್ಷಕರಿಂದ ಹಲ್ಲೆ: ಪಿಎಫ್‌ಐ, ಎಸ್‌ಡಿಪಿಐ ನಿಯೋಗ ಭೇಟಿ

ಉಡುಪಿ, ಡಿ. 29: ಕುಂದಾಪುರ ತಾಲೂಕಿನ ತೊಂಬಟ್ಟಿನ ಸ್ವಯಂ ಘೋಷಿತ ಗೋರಕ್ಷಕರು ಮತ್ತು ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಂಜುನಾಥ್ ಶೆಟ್ಟಿ ಹಾಗೂ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಮೀವುಲ್ಲಾ ಅವರನ್ನು ಪಿಎಫ್‌ಐ ಹಾಗೂ ಎಸ್‌ಡಿಪಿಐ ಉಡುಪಿ ಜಿಲ್ಲಾ ನಿಯೋಗವು ಇಂದು ಭೇಟಿ ಮಾಡಿದೆ.
ಗೋರಕ್ಷಕರು ಅನೈತಿಕ ಪೊಲೀಸ್‌ಗಿರಿ ನಡೆಸಿ ಇಬ್ಬರು ಅಮಾಯಕರಿಗೆ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರನ್ನು ಬಂಧಿಸಬೇಕಾಗಿದ್ದ ಪೋಲಿಸರು, ಹಲ್ಲೆಗೊಳಗಾದವರನ್ನೇ ಬಂಧಿಸಿ ಅವರ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ ಎಂದು ನಿಯೋಗವು ಆರೋಪಿಸಿದೆ.
ಪೋಲಿಸ್ ಇಲಾಖೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಕರ್ತವ್ಯದಲ್ಲಿ ಲೋಪವೆಸಗಿದ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷರು ಹಾಗೂ ಪೊಲೀಸ್ ಪೇದೆಗಳನ್ನು ಇಲಾಖೆ ತನಿಖೆಗೆ ಒಳಪಡಿಸಬೇಕು. ಒಂದು ವೇಳೆ ಸರಿಯಾದ ನ್ಯಾಯ ಸಿಗದೆ ಇದ್ದಲ್ಲಿ ತೀವ್ರವಾದ ಹೋರಾಟ ನಡೆಸುವುದಾಗಿ ನಿಯೋಗ ಎಚ್ಚರಿಕೆ ನೀಡಿದೆ.
ನಿಯೋಗದಲ್ಲಿ ಎಸ್‌ಡಿಪಿಐ ನಾಯಕರಾದ ಅಬ್ದುಲ್ ರೆಹಮಾನ್ ಮಲ್ಪೆ, ಆಸಿಫ್ ಕೋಟೇಶ್ವರ, ಸಾದಿಕ್ ಅಬು ಹಾಜಿ ಮತ್ತು ಪಿಎಫ್‌ಐ ನಾಯಕರಾದ ಆಲಂ ಬ್ರಹ್ಮಾವರ, ಬಶೀರ್ ಅಂಬಾಗಿಲು, ತಬ್ಬರೇಜ್ ಉಡುಪಿ, ರಾಹಿಮ್, ಲಿಯಕತ್ ಕಂಡ್ಲೂರು ಉಪಸ್ಥಿತರಿದ್ದರು.







