ಕೆಎಸ್ಸಾರ್ಟಿಸಿ ನಿವೃತ್ತ ನೌಕರರಿಗೆ ಉಚಿತ ಬಸ್ ಪಾಸ್

ಬೆಂಗಳೂರು, ಡಿ.29: 1998 ಮತ್ತು ನಂತರ ನಿವೃತ್ತರಾದ ಅಥವಾ ನಿವೃತ್ತರಾಗಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನಿವೃತ್ತಿ ನೌಕರರ, ಅಧಿಕಾರಿಗಳ ಅಥವಾ ಅವರ ಪತ್ನಿ ಮತ್ತು ಪತಿಗೆ ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಪ್ರಯಾಣಕ್ಕೂ ಮೊದಲು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸದ ಷರತ್ತಿಗೊಳಪಟ್ಟು ವಾರ್ಷಿಕ 500 ರೂ.ಗಳು ಸಂಸ್ಕರಣಾ ವೆಚ್ಚ ಪಡೆದು ಉಚಿತ ಬಸ್ ಪಾಸ್ ನೀಡಲು ಕೆಎಸ್ಸಾರ್ಟಿಸಿ ನಿಗಮದ ಸಭೆ ನಿರ್ಧರಿಸಿದೆ.
ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ನಡೆದ ಮಂಡಳಿ ನಿರ್ದೇಶಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದರ ಜೊತೆಗೆ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ಅಧಿಕಾರಿಗಳಿಗೆ ದರ್ಜೆ-2 ಮತ್ತು ಮೇಲ್ಪಟ್ಟು ಹಾಲಿ ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಇರುವ ಅವಕಾಶ ನೀಡಲಾಗಿದೆ.
ಅಲ್ಲದೆ, ನಿವೃತ್ತ ಅಧಿಕಾರಿಗಳು ಹಾಗೂ ಅವರ ಪತ್ನಿ ಅಥವಾ ಪತಿಗೆ ರಾಜಹಂಸ ಮತ್ತು ಹವಾನಿಯಂತ್ರಿತ ಸಾರಿಗೆಗಳು ಸೇರಿದಂತೆ ಎಲ್ಲಾ ಪ್ರತಿಷ್ಠಿತ ಸಾರಿಗೆಗಳಲ್ಲಿ ಆಸನಗಳು ಖಾಲಿಯಿದ್ದಲ್ಲಿ ಮಾತ್ರ ಹಾಗೂ ಪ್ರಯಾಣಕ್ಕೂ ಮೊದಲು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸದಂತೆ ಪ್ರಯಾಣಿಸುವ ಷರತ್ತಿಗೊಳಪಟ್ಟು ಪ್ರತಿಷ್ಠಿತ ಸಾರಿಗೆಗಳಿಗೆ ಮಾತ್ರ ಅನ್ವಯಿಸುವಂತೆ ಆಯಾ ವರ್ಗಗಳ ಸಾರಿಗೆಗಳಿಗೆ ಪೂರಕವಾದ ಮೂಲ ಪ್ರಯಾಣದರದ ಶೇಕಡ 50 ರಷ್ಟು ಪ್ರಯಾಣದರ ಪಾವತಿಸಿ ಪ್ರಯಾಣಿಸುವುದಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.
ಪ್ರಯಾಣಿಕರಿಗೆ ಸಮಗ್ರ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಪ್ರಯಾಣಿಕರ ಸಾರಿಗೆ ಅವಶ್ಯಕತೆಗಳಿಗಾಗಿ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಒಟ್ಟು 2 ಎಕರೆ 5 ಗುಂಟೆ ನಿವೇಶನಕ್ಕೆ ರೂ.7.71 ಲಕ್ಷಗಳನ್ನು ಕಾವೇರಿ ನೀರಾವರಿ ನಿಗಮಕ್ಕೆ ಪಾವತಿಸುವುದು ಹಾಗೂ ಕೆಎಸ್ಸಾರ್ಟಿಸಿ ನಿಗಮದ ಬಸ್ ನಿಲ್ದಾಣವನ್ನು ನಿರ್ಮಿಸುವ ಸಲುವಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಅರಣ್ಯ ಇಲಾಖೆಗೆ ಸೇರಿದ 1 ಎಕರೆ 6 ಗುಂಟೆ ನಿವೇಶನವನ್ನು ಮತ್ತು ಪಟ್ಟಣ ಪಂಚಾಯಿತಿಗೆ ಸೇರಿದ 13 ಗುಂಟೆ ನಿವೇಶನವನ್ನು 48,55,219 ರೂ.ಗಳನ್ನು ಪಟ್ಟಣ ಪಂಚಾಯಿತಿಗೆ ಪಾವತಿಸಲು ನಿಗಮದಿಂದ ಅನುಮತಿ ಪಡೆಯಲಾಯಿತು ಎಂದು ಪ್ರಕಟನೆ ತಿಳಿಸಿದೆ.







