ಮಂಡ್ಯ :ಕಚೇರಿಗಳಲ್ಲಿ ಕುವೆಂಪು ದಿನಾಚರಣೆ ಕಡ್ಡಾಯಕ್ಕೆ ಕರವೇ ಒತ್ತಾಯ

ಮಂಡ್ಯ, ಡಿ.29: ಎಲ್ಲ ಸರಕಾರಿ ಕಚೇರಿ ಹಾಗು ಅದರ ಅಂಗ ಸಂಸ್ಥೆಗಳಲ್ಲಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮವನ್ನುಕಡ್ಡಾಯಗೊಳಿಸಿ ಅರ್ಥಪೂರ್ಣವಾಗಿ ಆಚರಿಸಲು ಸರಕಾರ ಸುತ್ತೋಲೆ ಹೊರಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು ಒತ್ತಾಯಿಸಿದರು.
ವಿಶ್ವಮಾನವ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಜೆ ರಹಿತವಾಗಿ ಕುವೆಂಪು ಜನ್ಮದಿನಾಚರಣೆ ನಡೆಯಬೇಕೆಂದರು.
ಅಂದು ಸರಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಅರ್ಧದಿನವನ್ನು ಕುವೆಂಪು ಸಾಹಿತ್ಯ, ವಿಚಾರ, ವ್ಯಕ್ತಿತ್ವದ ಬಗ್ಗೆ ಚರ್ಚೆ ಮತ್ತು ಉಪನ್ಯಾಸಗಳಿಗೆ ಮೀಸಲಿಟ್ಟರೆ ಅರ್ಥಪೂರ್ಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಗೌರವಾಧ್ಯಕ್ಷ ಶಿವರಾಮೇಗೌಡ ಮಾತನಾಡಿ, ಕುವೆಂಪು ಅವರ ಅಭಿಮಾನಿಗಳು, ಆರಾಧಿಸುವವರು, ಮೆಚ್ಚುವವರು, ಅನುಸರಿಸುವವರು ಸಾಕಷ್ಟಿರಬಹುದು. ಆದರೆ, ಕುವೆಂಪು ಸಾಹಿತ್ಯ ಓದದವರ ಸಂಖ್ಯೆ ಬಹಳ ಇದೆ. ಮಕ್ಕಳಿಗೆ ಕುವೆಂಪು ಸಾಹಿತ್ಯ ಪರಿಚಯಿಸಬೇಕಾಗಿದೆ ಎಂದರು.
ಈ ಸಂಬಂಧ ಹಮ್ಮಿಕೊಂಡಿದ್ದ ಮೆರವಣಿಗೆಗೆ ಮಾಜಿ ಸಂಸದ ಜಿ.ಮಾದೇಗೌಡ ಚಾಲನೆ ನೀಡಿದರು. ಮಾರ್ಗಮಧ್ಯೆ ರೈತಸಭಾಂಗಣ ಆವರಣದ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರಾಧ್ಯಕ್ಷ ಟಿ.ಕೆ.ಸೋಮಶೇಖರ್, ಮುದ್ದೇಗೌಡ, ಷಣ್ಮುಖೇಗೌಡ, ಪಿ.ಎ.ಜೋಸೆಫ್, ರೇವಣ್ಣ, ಶಿವ, ಸಿದ್ದಪ್ಪ, ಸತೀಶ, ರಾಮಲಿಂಗು, ಸಿ.ಬಿ.ಕೆಂಪೇಗೌಡ ಪುಟ್ಟಸ್ವಾಮಿ, ಇತರರಿದ್ದರು.







