ಯಮೆನ್‌ನಲ್ಲಿ ಕಾಲರಾ ಮಹಾಮಾರಿ: ಲಸಿಕೆಗಾಗಿ ಪರದಾಡುತ್ತಿದೆ ಜಾಗತಿಕ ವೈದ್ಯವರ್ಗ

ಲಂಡನ್, ಡಿ.29: ಜಗತ್ತಿನ ಅತ್ಯಂತ ಕೆಟ್ಟ ಕಾಲರಾ ಸಾಂಕ್ರಮಿಕವು ಯಮೆನ್‌ನಲ್ಲಿ ದಾಖಲಾಗಿದ್ದು ಮುಂದಿನ ವರ್ಷ ಮಾರ್ಚ್‌ನಲ್ಲಿ ಈ ಮಾರಣಾಂತಿಕ ಕಾಯಿಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಯುದ್ಧಪೀಡಿತ ದೇಶದಲ್ಲಿ ಮಹಾಮಾರಿಯನ್ನು ತಡೆಯಲು ಲಸಿಕೆಯನ್ನು ತಯಾರಿಸುವ ಸವಾಲು ಜಾಗತಿಕ ಆರೋಗ್ಯರಕ್ಷಣಾ ತಜ್ಞರ ಮುಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಸದ್ಯ ಜಾಗತಿಕವಾಗಿ ಸುಮಾರು ಮೂರು ಮಿಲಿಯನ್ ಪ್ರಮಾಣದಷ್ಟು (ಡೋಸ್) ಕಾಲರಾದ ಮೌಖಿಕ ಲಸಿಕೆಯು ಲಭ್ಯವಿದೆ. ಮಳೆಗಾಲಕ್ಕೂ ಮುನ್ನ ಅವುಗಳನ್ನು ಹಡಗುಗಳ ಮೂಲಕ ಯಮೆನ್‌ಗೆ ಸಾಗಿಸಿ ರೋಗದ ವಿರುದ್ಧ ಪ್ರತಿರಕ್ಷಣೆ ಒದಗಿಸಲು ನೀಡಬಹುದು. ಈ ರೀತಿ ಮಳೆಗಾಲದಲ್ಲಿ ಶೌಚದ ಮೂಲಕ ಕಾಲರಾ ರೋಗವು ಹರಡುವುದನ್ನು ತಡೆಯಬಹುದು ಎಂದು ಸಂಸ್ಥೆ ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇಲ್ಲಿಯವರೆಗೆ ಒಂದು ಮಿಲಿಯನ್ ಈ ಜನರು ಮಾರಕ ರೋಗಕ್ಕೆ ತುತ್ತಾಗಿದ್ದಾರೆ.
ಯಮೆನ್‌ನಲ್ಲಿ ನರಳುತ್ತಿರುವ ಜನರಿಗೆ ಲಸಿಕೆಯನ್ನು ಪೂರೈಸುವ ಯೋಜನೆಯನ್ನು ಈ ವರ್ಷದ ಆರಂಭದಲ್ಲಿ ದೇಶದಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದ ಕಾರಣ ಕೈಬಿಡಲಾಗಿತ್ತು. ಡಬ್ಲೂಎಚ್‌ಒ ಮತ್ತು ಯಮೆನ್ ಅಧಿಕಾರಿಗಳು ಸಾಗಾಟದ ಮತ್ತು ತಾಂತ್ರಿಕ ಸಮಸ್ಯೆಗಳಿರುವ ಕಾರಣ ಈ ಯೋಜನೆಯನ್ನು ಕೈಬಿಟ್ಟಿದ್ದರು.
ಯಮೆನ್‌ನಲ್ಲಿ ತಲೆಯೆತ್ತಿರುವ ಕಾಲರಾ ಜಗತ್ತಿನಲ್ಲಿ ದಾಖಲಾದ ಅತ್ಯಂತ ಕೆಟ್ಟ ಮಹಾಮಾರಿಗಳಲ್ಲಿ ಒಂದು ಎಂದು ಹೇಳಲಾಗಿದೆ. ಸಂಘರ್ಷ ಮತ್ತು ವಿನಾಶದ ಸಮಯದಲ್ಲಿ ತಲೆಯೆತ್ತುವ ಈ ಮಾರಣಾಂತಿಕ ಕಾಯಿಲೆಗೆ ಕಳೆದ ಎಪ್ರಿಲ್‌ನಿಂದ 2,200ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ.
ಇನ್ನು ಶಂಕಿತ ರೋಗಿಗಳ ಸಂಖ್ಯೆ ಒಂದು ಮಿಲಿಯನ್ ತಲುಪಿದ್ದು ದೇಶದಲ್ಲಿ ಏಳು ಮಿಲಿಯನ್ ಜನರು ಅನಾವೃಷ್ಟಿಯ ಹಿಡಿತಕ್ಕೆ ಸಿಲುಕುವ ಮತ್ತು ಡಿಫ್ತೀರಿಯಾ ಕಾಯಿಲೆಗೆ ತುತ್ತಾಗುವ ಸಾಧ್ಯತೆಯಿದೆ ಎಂದು ರೆಡ್ ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿ ಎಚ್ಚರಿಸಿದೆ.







