ಬೆಂಗಳೂರು :ಮಲಹೊರುವ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ತೀರ್ಮಾನ ;ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ
ಬೆಂಗಳೂರು,ಡಿ.29: ಬಿಬಿಎಂಪಿ ಸೇರಿದಂತೆ ಎಲ್ಲ ನಗರ, ಪಟ್ಟಣ, ಪಂಚಾಯತಿ ಪ್ರದೇಶಗಳಲ್ಲಿ ಚರಂಡಿ, ಮೋರಿ, ಪಿಟ್‌ಗಳನ್ನು ಸ್ವಚ್ಛಗೊಳಿಸಲು ಸಕ್ಕಿಂಗ್ ಮಷಿನ್, ಜಕ್ಕಿಂಗ್ ಮಷಿನ್ ಮತ್ತು ರಾಡಿಂಗ್ ಮಷಿನ್‌ಗಳನ್ನು ಬಳಸಿಕೊಂಡು ಯಂತ್ರಾಧಾರಿತ ಸ್ವಚ್ಛತೆಯನ್ನು ಅಳವಡಿಸಿಕೊಂಡು ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರಕಾರ ತೀರ್ಮಾನಿಸಿದೆ.
ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಕುರಿತು ಮತ್ತು ಸಮಾಜಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳ ಕುರಿತು ನಡೆದ ಸಭೆಯಲ್ಲಿ ಹಲವಾರು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಸಫಾಯಿ ಕರ್ಮಚಾರಿಗಳ ಸಂಘ ಸಂಸ್ಥೆಗಳಿಗೆ ರಾಜ್ಯ ಸಫಾಯಿ ಅಭಿವೃದ್ಧಿ ನಿಗಮದಿಂದ ಸಾಲ ಸಹಾಯಧನ ರೂಪದಲ್ಲಿ ಒದಗಿಸಿ ಯಂತ್ರಾಧಾರಿತ ಸ್ವಚ್ಛತೆಗೆ ಬೇಕಾದ ಉಪಕರಣಗಳನ್ನು ಒದಗಿಸುವುದು. ಬಳಕೆದಾರರ ಪಾವತಿ ಆಧಾರದ ಮೇಲೆ ಸಫಾಯಿ ಕರ್ಮಚಾರಿಗಳಿಗೆ ಉದ್ಯೋಗಾವಕಾಶ ಒದಗಿಸಲು ಪ್ರಯತ್ನಿಸಲಾಗುವುದು. ಸಫಾಯಿ ಕರ್ಮಚಾರಿಗಳು, ಲೋಡರ್, ತ್ಯಾಜ್ಯ ವಿಲೇವಾರಿ ವಾಹನದ ಚಾಲಕರು ಮುಂತಾದವರಿಗೆ ಕನಿಷ್ಟ ವೇತನ ಕಾಯಿದೆ ಅಡಿ ವೇತನ ನಿಗದಿಪಡಿಸಿ ಅನುಷ್ಠಾನಗೊಳಿಸಲು ಮತ್ತು ಪಿ.ಎಫ್ ಹಾಗೂ ಇ.ಎಸ್.ಐ ಇತರೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕಾರ್ಮಿಕ ಇಲಾಖೆಗೆ ಸೂಚಿಸಲಾಯಿತು.
ಸಫಾಯಿ ಕರ್ಮಚಾರಿಗಳು ಕೆಲಸ ಮಾಡುವಾಗ ಅಗತ್ಯವಿರುವ ಸುರಕ್ಷತಾ ಪರಿಕರಗಳನ್ನು ಒದಗಿಸಲು ಎಲ್ಲ್ಲ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ನಗರಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಸಭೆಯಲ್ಲಿ ತಿಳಿಸಲಾಗಿದೆ.
ನಗರ, ಸ್ಥಳೀಯ ಸಂಸ್ಥೆಗಳು ನಿರ್ಮಿಸಿರುವ ಮನೆಗಳಲ್ಲಿ ಬಹಳ ವರ್ಷಗಳಿಂದ ವಾಸ ಮಾಡುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಆ ಮನೆಗಳ ಹಕ್ಕು ಪತ್ರ ನೀಡುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. (ಪ್ರಮುಖವಾಗಿ ಬೆಳಗಾವಿ ನಗರದಲ್ಲಿ ಪೌರ ಕಾರ್ಮಿಕರ ವಸತಿ ಸಮುಚ್ಛಯದ ಬಗ್ಗೆ ಪ್ರಸ್ತಾಪಿಸಲಾಗಿದೆ).
700 ಜನರಿಗೆ ಒಬ್ಬ ಸಫಾಯಿ ಕರ್ಮಚಾರಿಯನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಈಗಿರುವ ಮಾನದಂಡವನ್ನು ಪ್ರಸ್ತುತ ಜನಸಂಖ್ಯೆಗನುಗುಣವಾಗಿ ಪರಿಷ್ಕರಿಸಲು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ. ಸಫಾಯಿ ಕರ್ಮಚಾರಿಗಳ ಆರೋಗ್ಯ ದೃಷ್ಟಿಯಿಂದ ‘ಯುನಿವರ್ಸಲ್ ಹೆಲ್ತ್ ಸ್ಕೀಂ’ ಅಡಿಯಲ್ಲಿ ತರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ತಿಳಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಕ್ರಮ ವಹಿಸಬೇಕು. ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ವಸತಿ ಶಾಲೆ, ಹಾಸ್ಟೆಲ್‌ಗಳನ್ನು ದುರಸ್ತಿ, ಉನ್ನತೀಕರಿಸಲು ಕ್ರಮ ವಹಿಸಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ನಿಗದಿಪಡಿಸಿರುವ 200 ವಿಶ್ವವಿದ್ಯಾಲಯಗಳ ಪಟ್ಟಿಯನ್ನು ರದ್ದುಪಡಿಸಿ, ವಿದ್ಯಾರ್ಥಿಗಳು ಯಾವುದೆ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಅತೀ ಹಿಂದುಳಿದ ಸಮುದಾಯ ಮಕ್ಕಳನ್ನು ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಕೆಲವು ಗುರುತಿಸಿದ ಪ್ರತಿಷ್ಟಿತ ಶಾಲೆಗಳಲ್ಲಿ ಪ್ರವೇಶ ಪಡೆಯುವ ಬಗ್ಗೆ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸುವುದು. ದೇವದಾಸಿಯರ ಮಕ್ಕಳ ವಿವಾಹಕ್ಕೆ 3.50 ಲಕ್ಷ ರೂ.ಗಳನ್ನು ಪ್ರೋತ್ಸಾಹ ಧನವಾಗಿ ನೀಡಲು ಚಾಲ್ತಿಯಲ್ಲಿರುವ ಅಂತರಜಾತಿ ವಿವಾಹದ ಪ್ರೋತ್ಸಾಹ ಧನ ಯೋಜನೆಯಲ್ಲಿ ಸೇರಿಸಲು ಕ್ರಮ ವಹಿಸುವುದು. ಭೂ ರಹಿತ ಎಸ್ಸಿ-ಎಸ್ಟಿ ಕೃಷಿ ಕಾರ್ಮಿಕರಿಗೆ ಭೂ ಒಡೆತನ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಜಮೀನುಗಳಿಗೆ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿಗಳ ಸೌಕರ್ಯ ಒದಗಿಸಲು ಸೂಚಿಸಲಾಗಿದೆ. ಅಲ್ಲದೆ, ಫಲಾನುಭವಿಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ನೀಡುತ್ತಿರುವ ಹನಿ ನೀರಾವರಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಯಿತು. ದೇವದಾಸಿಯರಿಗೂ ಈ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ಇತ್ಯರ್ಥಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಲ್ಯಾಪ್‌ಟಾಪ್‌ಗಳನ್ನು ನೀಡುವ ಬಗ್ಗೆ ಪರಿಶೀಲಿಸುವಂತೆ ತಿಳಿಸಲಾಯಿತು. ಈ ಸಭೆಯಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು, ಯೋಜನಾ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ಎಸ್‌ಸಿಪಿಟಿಎಸ್‌ಪಿಯ ಸಮಾಲೋಚಕರು ಉಪಸ್ಥಿತರಿದ್ದರು.







