ನ್ಯೂಯಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ನವಜಾತ ಶಿಶು, ಮಕ್ಕಳು ಸೇರಿ 12 ಸಾವು

ನ್ಯೂಯಾರ್ಕ್, ಡಿ.29: 25 ವರ್ಷಗಳಲ್ಲೇ ನ್ಯೂಯಾರ್ಕ್ ನಗರದಲ್ಲಿ ಸಂಭವಿಸಿದ ಅತ್ಯಂತ ಭೀಕರ ಅಗ್ನಿ ಅನಾಹುತ ಎಂದು ವ್ಯಾಖ್ಯಾನಿಸಲಾಗುತ್ತಿರುವ ದುರಂತದಲ್ಲಿ ನವಜಾತ ಶಿಶು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದ್ದು ಅನೇಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇಂದು ನಾವು ಮಾತು ಕೂಡಾ ಹೊರಬರದಂತಹ ದುರಂತವೊಂದಕ್ಕೆ ಸಾಕ್ಷಿಯಾಗಿದ್ದೇವೆ. ರಜಾದಿನಗಳಲ್ಲಿ ಕುಟುಂಬ ಸದಸ್ಯರು ಜೊತೆಯಾಗಿರುತ್ತಾರೆ. ಆದರೆ ಬ್ರಾಂಕ್ಸ್‌ನಲ್ಲಿ ಸಂಭವಿಸಿರುವ ಈ ಅಗ್ನಿದುರಂತವು ಕುಟುಂಬಗಳ ಸಂತೋಷವನ್ನು ಕಸಿದಿದೆ ಎಂದು ನ್ಯೂಯಾರ್ಕ್‌ನ ಮೇಯರ್ ಬಿಲ್ ಡೆ ಬ್ಲಾಸಿಯೊ ಖೇದ ವ್ಯಕ್ತಪಡಿಸಿದ್ದಾರೆ.
ಕಟ್ಟಡದ ಮೊದಲ ಅಂತಸ್ತಿನಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಇತರ ಅಂತಸ್ತುಗಳಿಗೆ ವ್ಯಾಪಿಸಿದೆ. ಪ್ರತೀ ಅಂತಸ್ತಿನಲ್ಲೂ ಎಲ್ಲೆಂದರಲ್ಲಿ ಶವಗಳು ಬಿದ್ದಿದ್ದು ಸಾವನ್ನಪ್ಪಿರುವವರಲ್ಲಿ ಒಂದು ವರ್ಷದ ಮಗುವಿನಿಂದ ಹಿಡಿದು ಐವತ್ತು ವರ್ಷದ ವೃದ್ಧರೂ ಇದ್ದಾರೆ. ಆ ದೃಶ್ಯವನ್ನು ಕಂಡು ನಮಗೆ ಕೂಡಾ ಆಘಾತವಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಡೇನಿಯಲ್ ನಿಗ್ರೊ ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್‌ಗೆ ಅಳವಡಿಸಲಾಗಿದ್ದ ನೈಸರ್ಗಿಕ ಅನಿಲ ಪೂರೈಕೆಯ ಪೈಪ್ ಸ್ಫೋಟಗೊಂಡ ಕಾರಣ ಈ ಅಗ್ನಿ ದುರಂತ ಸಂಭವಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದ್ದರೂ ಈ ಬಗ್ಗೆ ಸರಿಯಾದ ತನಿಖೆ ನಡೆಸಿದ ನಂತರವೇ ಸ್ಪಷ್ಟಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಈಗ ರಕ್ತ ಹೆಪ್ಪುಗಟ್ಟುವಷ್ಟು ಚಳಿಯಿದ್ದು ದೇಹಶಾಖಕ್ಕಾಗಿ ಜನರು ತಮ್ಮ ಮನೆಯೊಳಗೆ ಬೆಂಕಿ ಹಾಕಿದ್ದರು ಎಂದು ಪತ್ರಿಕೆಗಳು ವರದಿ ಮಾಡಿವೆ. ಗಾಳಿ ವೇಗವಾಗಿ ಬೀಸುತ್ತಿದ್ದ ಕಾರಣ ಬೆಂಕಿಯ ಕೆನ್ನಾಲಗೆ ಇತರ ಅಂತಸ್ತುಗಳಿಗೆ ವ್ಯಾಪಿಸಲು ಹೆಚ್ಚು ಸಮಯ ಹಿಡಿಯಲಿಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.







