ಕಲಬುರಗಿ: ಕುವೆಂಪು ಸಾಹಿತ್ಯದ ಮೂಲಕ ಸಮಾಜ ತಿದ್ದಿದ ಕವಿ; ಡಾ.ಶರಣಪ್ರಕಾಶ ಪಾಟೀಲ
ಕಲಬುರಗಿ,ಡಿ.29: ರಾಷ್ಟ್ರಕವಿ ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜದಲ್ಲಿನ ತೊಡಕುಗಳನ್ನು ತಿದ್ದಿದ ಕವಿ. ಅವರ ವಿಶ್ವಮಾನವ ತತ್ವವನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಕರೆ ನೀಡಿದ್ದಾರೆ. ಶುಕ್ರವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಹಿತ್ಯ ಲೋಕದ ದಿಗ್ಗಜರಾದ ಕುವೆಂಪು ಅವರು ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿದ ಕವಿ. ಅವರ ವಿಶ್ವಮಾನವ ತತ್ವ ಜಗತ್ತಿಗೆ ಪ್ರೇರಣೆಯಾಗಿದೆ ಎಂದರು.
ವಿದ್ಯಾರ್ಥಿಗಳು ಕುವೆಂಪು ಅವರ ಸಾಹಿತ್ಯ ಅಧ್ಯಯನದ ಜೊತೆಗೆ ವಚನ ಸಾಹಿತ್ಯ, ದಾಸ ಸಾಹಿತ್ಯ ಓದುವುದರ ಮೂಲಕ ಅದರಲ್ಲಿನ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಡೆ ಮತ್ತು ನುಡಿ ಒಂದಾಗಿರುವ ವ್ಯಕ್ತಿ ಮಾತ್ರ ಬೇರೊಬ್ಬರ ಮೇಲೆ ಪ್ರಭಾವ ಬೀರಲು ಸಾಧ್ಯ. ಶರಣರು ನಡೆದಂತೆ ನುಡಿದಿದ್ದರಿಂದಲೇ ಇವತ್ತಿಗೂ ಅವರ ವಿಚಾರಗಳು ಜೀವಂತವಾಗಿವೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಮಾನವೀಯತೆ ಮೈಗೂಡಿಸಿಕೊಂಡರೆ ಜೀವನದಲ್ಲಿ ಏನನ್ನಾದರು ಸಾಧಿಸಲು ಸಾಧ್ಯವಿದೆ ಎಂದರು.
ಕುವೆಂಪು ಅವರ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲರಾದ ಡಾ.ಸ್ವಾಮಿರಾವ ಕುಲಕರ್ಣಿ, ಕುವೆಂಪು ಅವರ ಸಾಹಿತ್ಯ ಮಾತ್ರವಲ್ಲ. ಅವರ ಬದುಕು ಸಹ ಆದರ್ಶಪ್ರಾಯವಾಗಿದೆ. ಕಳೆದು ಹೋಗುತ್ತಿರುವ ಮೌಲ್ಯಗಳಿಗೆ ಮರು ಜೀವ ನೀಡುವ ಶಕ್ತಿ ಸಾಹಿತ್ಯಕ್ಕಿದೆ ಎಂಬುವುದನ್ನು ತೋರಿಸಿಕೊಟ್ಟವರು ಕುವೆಂಪು. ಕುವೆಂಪು ಅವರ ಕುರಿತು ಮಾತನಾಡುವುದೆಂದರೆ ಕಲ್ಲು ಸಕ್ಕರೆ ತಿಂದಂತೆ ಯಾವುದೆ ಕಡೆಯಿಂದ ಕಡಿದರು ಸಿಹಿಯೇ ಇರುತ್ತದೆ ಎಂದರು.
ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮೊಟ್ಟ ಮೊದಲ ಕವಿ ಕುವೆಂಪು. ಹುಟ್ಟುವಾಗ ಮಗು ವಿಶ್ವಮಾನವನೆ ಆದರೆ ಮಗು ಬೆಳೆದಂತೆ ಸಮಾಜ ಅವನನ್ನು ಸಂಕುಚಿತ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಕುವೆಂಪು ಅವರ ವಿಶ್ವಮಾನವ ಸಂದೇಶದಂತೆ ನಾವೆಲ್ಲರು ವಿಶ್ವಮಾನವರಾಗಬೇಕಾಗಿದೆ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಹಣಮಂತ ಮಾಲಾಜಿ, ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣ ಸಂಕನೂರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಡಿ.ಕಲಬುರಗಿ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಉಪಸ್ಥಿತರಿದ್ದರು.







