ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ : ಕೆ.ಸಿ.ವೇಣುಗೋಪಾಲ್
ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಶಿಡ್ಲಘಟ್ಟ, ಡಿ.29: ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ. 80ರಷ್ಟು ಈಡೇರಿಸಿದೆ. ಕೇಂದ್ರ ಸರಕಾರದ ಹೇರಿರುವ ಜಿಎಸ್‌ಟಿ ತಿನ್ನುವ ಅನ್ನಕ್ಕೂ ತೆರಿಗೆ ಪಡೆಯುತ್ತಿದ್ದಾರೆ. ಭಾಷಣ ತುಂಬಾ ಚೆನ್ನಾಗಿದೆ. ಕೆಲಸ ಇಲ್ಲ. ಜೆಡಿಎಸ್ ನಮಗೆ ಲೆಕ್ಕಕ್ಕಿಲ್ಲ.ಮನೆ ಮನೆಗೆ ಹೋಗಿ ಜನರಿಗೆ ಸರಕಾರದ ಯೋಜನೆಗಳನ್ನು ತಿಳಿಸಿ ಎಂದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವಂತಹ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು, ನಾಲ್ಕೂವರೆ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಈ ಸಮಾವೇಶದ ಗುರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಸಮರ್ಥ ನಾಯಕತ್ವ, ಸ್ವಚ್ಛವಾದ ಆಡಳಿತ, ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬಡವರ ಹಸಿವು ನೀಗಿಸುವ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬಿಜೆಪಿ ಸಂಸದರೊಟ್ಟಿಗೆ ಪ್ರಧಾನಿ ನರೇಂದ್ರಮೋದಿ ಅವರ ಬಳಿಗೆ ನಿಯೋಗ ಹೋಗಿ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದರೂ ಬರಿಗೈಯಲ್ಲಿ ಹಿಂದಿರುಗಬೇಕಾಯಿತು ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು, ಜಾತ್ಯಾತೀತರಿಗೆ ತಂದೆ-ತಾಯಿ ಗೊತ್ತಿಲ್ಲ ಎನ್ನುವ ತುಚ್ಚಕರವಾದ ಭಾಷೆ ಬಳಕೆ ಮಾಡಿದ್ದಾರೆ. ಇದು ಅವರಿಗೆ ತಕ್ಕುದ್ದಲ್ಲ ಎಂದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅ್ಯರ್ಥಿಯನ್ನು ಗೆಲ್ಲಿಸದಿದ್ದರೆ ಈಗಲೇ ಹೇಳಿಬಿಡಿ, ನಾವು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಎತ್ತಿನಹೊಳೆ ಯೋಜನೆಗೆ 12 ಸಾವಿರ ಕೋಟಿ ರೂ., ಕೆ.ಸಿ.ವ್ಯಾಲಿ ಯೋಜನೆ, ಹೆಬ್ಬಾಳ ನಾಗವಾರ ಕೆರೆಗಳ ನೀರಿನಿಂದ ಕೆರೆಗಳನ್ನು ತುಂಬಿಸುವುದು, 8,165 ಕೋಟಿ ರೂ. ಸಾಲ ಮನ್ನಾ, ಮಾಡಿದೆ. ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದರು.
ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಶಿಡ್ಲಘಟ್ಟ ಸೇರಿದಂತೆ ಅವಿಬಾಜ್ಯ ಕೋಲಾರ ಜಿಲ್ಲೆಗಳಲ್ಲಿ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕಾಗಿದ್ದು, ಕಾರ್ಯಕರ್ತರು, ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದ ಅವರು, ಇಂತಹ ಸಮಾವೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಒಂದೊಂದು ಬೂತ್‌ಗೆ ಕನಿಷ್ಠ 25 ಮಂದಿಯನ್ನು ಸೇರಿಸಿದರೆ ಕನಿಷ್ಠ 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭ ಗೃಹ ಸಚಿವ ರಾಮಲಿಂಗಾರೆಡ್ಡಿ, ಸಚಿವ ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ರಿಝ್ವಿನ್ ಹರ್ಷದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.







